ಲ್ಯಾಂಡಿಂಗ್‌ ವೇಳೆ ವಿಮಾನ ಉಲ್ಟಾಪಲ್ಟಾ ಆದರೂ 80 ಜನ ಬಚಾವ್‌

| Published : Feb 19 2025, 12:45 AM IST

ಲ್ಯಾಂಡಿಂಗ್‌ ವೇಳೆ ವಿಮಾನ ಉಲ್ಟಾಪಲ್ಟಾ ಆದರೂ 80 ಜನ ಬಚಾವ್‌
Share this Article
  • FB
  • TW
  • Linkdin
  • Email

ಸಾರಾಂಶ

76 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳಿದ್ದ ವಿಮಾನವೊಂದು ಸೋಮವಾರ ಕೆನಡಾದ ಟೊರಾಂಟೋ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿಕೊಂಡು, ವಿಮಾನ ಪೂರ್ಣ ಉಲ್ಟಾಪಲ್ಟಾ ಆದರೂ ಅದೃಷ್ಟವಶಾತ್‌ ವಿಮಾನದಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್‌ ಆಗಿದ್ದಾರೆ.

ಟೊರಾಂಟೋ: 76 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳಿದ್ದ ವಿಮಾನವೊಂದು ಸೋಮವಾರ ಕೆನಡಾದ ಟೊರಾಂಟೋ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿಕೊಂಡು, ವಿಮಾನ ಪೂರ್ಣ ಉಲ್ಟಾಪಲ್ಟಾ ಆದರೂ ಅದೃಷ್ಟವಶಾತ್‌ ವಿಮಾನದಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್‌ ಆಗಿದ್ದಾರೆ.

ಅಪಘಾತದ ವೇಳೆ ವಿಮಾನದ ಇಂಧನ ಟ್ಯಾಂಕ್‌ಗೆ ಯಾವುದೇ ಹಾನಿಯಾಗದ ಕಾರಣ ದೊಡ್ಡಮಟ್ಟದ ಬೆಂಕಿ ಕಾಣಿಸಿಕೊಳ್ಳದ್ದು ಮತ್ತು ವಿಮಾನಕ್ಕೆ ಭಾರೀ ಹಾನಿಯಾಗದೇ ಇದ್ದದ್ದು ಜನರು ಪ್ರಾಣ ಉಳಿಸಿಕೊಳ್ಳಲು ಕಾರಣವಾಗಿದೆ. ವಿಮಾನ ಅಪಘಾತದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಘಟನೆಯ ತೀವ್ರತೆಗೆ ಸಾಕ್ಷಿಯಾಗಿ ಹೊರಹೊಮ್ಮಿದೆ.

ಏನಾಯ್ತು?:

ಡೆಲ್ಟಾ ಏರ್‌ಲೈನ್ಸ್‌ಗೆ ಸೇರಿದ ಬೊಂಬಾರ್ಡಿಯರ್‌ ವಿಮಾನ ಸೋಮವಾರ ಮಧ್ಯಾಹ್ನ 2.15ರ ವೇಳೆಗೆ ಟೊರಾಂಟೋದ ಪಿಯರ್ಸ್ಸನ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಲ್ಯಾಂಡಿಂಗ್‌ಗೂ ಕೆಲ ಕ್ಷಣಗಳ ಮೊದಲು ಎಟಿಸಿ ಮತ್ತು ವಿಮಾನದ ಪೈಲಟ್‌ ನಡುವೆ ಸಂವಾದ ನಡೆದಾಗ ಎಲ್ಲವೂ ಸರಿಯಾಗಿತ್ತು.

ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಭಾರೀ ಸದ್ದಿನೊಂದಿಗೆ ರನ್‌ವೇ ಅಪ್ಪಳಿಸಿದ ರೀತಿಯಲ್ಲಿ ಲ್ಯಾಂಡಿಂಗ್‌ ಆಗಿದೆ. ಈ ತೀವ್ರತೆಗೆ ಘಟನಾ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದೂ ಅಲ್ಲದೆ ವಿಮಾನ ಪೂರ್ಣ ಉಲ್ಟಾ ಆಗಿ ಬಿದ್ದಿದೆ. ಅದೃಷ್ಟವಶಾತ್‌ ಸಾವಿರಾರು ಲೀಟರ್‌ ಇದ್ದ ವಿಮಾನದ ಇಂಧನ ಟ್ಯಾಂಕ್‌ಗೆ ಅಪಘಾತದಲ್ಲಿ ಯಾವುದೇ ಹಾನಿಯಾಗದ ಕಾರಣ, ಅಪಘಾತದ ವೇಳೆ ಕಾಣಿಸಿಕೊಂಡ ಬೆಂಕಿ ವ್ಯಾಪಿಸಿಲ್ಲ. ಜೊತೆಗೆ ಕಾಣಿಸಿಕೊಂಡ ಬೆಂಕಿ ಕೂಡಾ ಸ್ಥಳದಲ್ಲಿನ ಭಾರೀ ಹಿಮಪಾತದ ತೀವ್ರತೆಗೆ ಆರಿ ಹೋಗಿದೆ. ಜೊತೆಗೆ ವಿಮಾನಕ್ಕೂ ಹೆಚ್ಚಿನ ಹಾನಿಯಾಗದ ಕಾರಣ ವಿಮಾನದೊಳಗಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಪೈಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹೊರತುಪಡಿಸಿದರೆ ಉಳಿದಂತೆ ಯಾವುದೇ ತೊಂದರೆ ಆಗಿಲ್ಲ.

ಭಾರೀ ಹಿಮಗಾಳಿ:

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು, ಹೊರಗೆ ಭಾರೀ ಪ್ರಮಾಣದ ಹಿಮಗಾಳಿ ಬೀಸುತ್ತಿತ್ತು. ಇದ್ದಕ್ಕಿದ್ದಂತೆ ವಿಮಾನ ಭಾರೀ ಸದ್ದಿನೊಂದಿಗೆ ಲ್ಯಾಂಡಿಂಗ್‌ ಆಯಿತು. ಬಳಿಕ ವಿಮಾನ ಪಕ್ಕಕ್ಕೆ ಸರಿದಂತೆ ಆಯಿತು. ನಂತರ ಏನಾಯಿತು ಎಂದು ಗೊತ್ತಾವುದರೊಳಗೆ ನಾನು ವಿಮಾನದಲ್ಲಿ ಉಲ್ಟಾಪಲ್ಟಾ ಆಗಿ ಬಿದ್ದಿದ್ದೆ ಎಂದು ಹೇಳಿದ್ದಾರೆ.

ಭಾರೀ ಹಿಮಗಾಳಿಯ ಕಾರಣ ಪೈಲಟ್‌ಗೆ ರನ್‌ವೇ ಸೂಕ್ತವಾಗಿ ಕಾಣದೇ ಇದ್ದಿದ್ದು ವಿಮಾನ ರನ್‌ವೇ ಅಪ್ಪಳಿಸಲು ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಆದರೆ ಕೆನಡಾ ಅಧಿಕಾರಿಗಳು ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ಸೋಮವಾರ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಉಷ್ಣಾಂಶ ಮೈನಸ್‌ 8.6 ಡಿಗ್ರಿ ಸೆಲ್ಷಿಯಸ್‌ನಷ್ಟು ಇತ್ತು.