ಸಾರಾಂಶ
ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಸೋಲನ್ನು ಪಾಠವಾಗಿ ಪರಿಗಣಿಸುತ್ತೇವೆ ಎಂದ ಸೋನಿಯಾ ಗಾಂಧಿ.
ನವದೆಹಲಿ: ವಿಧಾನಸಭೆ ಚುನಾವಣೆಯ ಸೋಲಿನಿಂದ ಉಂಟಾಗಿರುವ ಹತಾಶೆಯನ್ನು ಮುಂದಿನ ಲೋಕಸಭೆ ಚುನಾವಣೆಯ ಗೆಲುವಿನ ಮೆಟ್ಟಿಲಾಗಿ ಬಳಸಿಕೊಳ್ಳಿ ಎಂದು ಸಂಸದರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ.
ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಸೋಲು ನಿರಾಶಾದಾಯಕವಾಗಿದೆ. ಆದರೆ ಇದನ್ನು ನಾವು ಪಾಠವಾಗಿ ಪರಿಗಣಿಸಿ ನಮ್ಮ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಿಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಇದನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳಬೇಕು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ನಾವು ಅಗಾಧವಾದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೂ ನಮ್ಮ ಸ್ಥೈರ್ಯ ಕೆಡುವುದಿಲ್ಲ ಎಂದು ನಂಬುತ್ತೇನೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಸಿದ್ದಾಂತಗಳು ಮತ್ತು ಮೌಲ್ಯಗಳು ನಮಗೆ ಮಾರ್ಗದರ್ಶಿಯಾಗಲಿವೆ. ಈ ವಿರೋಧಾಭಾಸಗಳನ್ನು ನಮ್ಮ ನಾಯಕರು ಧೈರ್ಯದಿಂದ ಹೋರಾಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಮುಂದಿನ ಚುನಾವಣೆಗಳಲ್ಲಿ ಧನಾತ್ಮಕವಾಗಿ ಭಾಗಿಯಾಗಿ ಎಂದು ಅವರು ಹೇಳಿದರು.