ಸಾರಾಂಶ
: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಕರ್ನಾಟಕ ಹೋರಾಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್‌ಗೆ ಆಲೌಟ್ ಆದ ಕರ್ನಾಟಕ, ಬಳಿಕ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸು ಸಾಧಿಸಲು ವಿಫಲವಾಯಿತು.
ರಾಜ್‌ಕೋಟ್: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಕರ್ನಾಟಕ ಹೋರಾಟ ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್‌ಗೆ ಆಲೌಟ್ ಆದ ಕರ್ನಾಟಕ, ಬಳಿಕ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸು ಸಾಧಿಸಲು ವಿಫಲವಾಯಿತು. ಆದರೆ, ದಿನದಾಟದ ಅಂತ್ಯದ ವೇಳೆಗೆ 4 ವಿಕೆಟ್ ಕಬಳಿಸಿ, ಮುನ್ನಡೆ ಸಾಧಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸೌರಾಷ್ಟ್ರ 4 ವಿಕೆಟ್‌ಗೆ 200 ರನ್ ಗಳಿಸಿದ್ದು, ಇನ್ನೂ 172 ರನ್ ಹಿನ್ನಡೆಯಲ್ಲಿದೆ. ಎರಡೂ ತಂಡಗಳು ಮೊದಲು ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಪ್ರಯತ್ನಿಸಲಿದ್ದು, ಆ ಬಳಿಕ ಗೆಲುವಿನ ಬಗ್ಗೆ ಯೋಚಿಸಲಿವೆ.
ಮೊದಲ ದಿನ 5 ವಿಕೆಟ್‌ಗೆ 295 ರನ್ ಗಳಿಸಿದ್ದ ಕರ್ನಾಟಕ, 2ನೇ ದಿನ ಆ ಮೊತ್ತಕ್ಕೆ ಕೇವಲ 77 ರನ್ ಸೇರಿಸಲು ಶಕ್ತವಾಯಿತು. ಮೊದಲ ದಿನ 66 ರನ್ ಗಳಿಸಿದ್ದ ಸ್ಮರಣ್, ಗುರುವಾರ ಆ ಮೊತ್ತಕ್ಕೆ 11 ರನ್ ಸೇರಿಸಿ ಔಟಾದರು. ಶ್ರೇಯಸ್ ಗೋಪಾಲ್ (95 ಎಸೆತದಲ್ಲಿ 56 ರನ್) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಶಿಖರ್ ಶೆಟ್ಟಿ (41) ಉಪಯುಕ್ತ ಕೊಡುಗೆ ನೀಡಿ ತಂಡದ ಮೊತ್ತವನ್ನು 372ಕ್ಕೆ ಹೆಚ್ಚಿಸಿದರು.
ಸೌರಾಷ್ಟ್ರ ಅತ್ಯುತ್ತಮ ಆರಂಭ ಪಡೆಯಿತು. ಹಾರ್ವಿಕ್ ದೇಸಾಯಿ (41) ಹಾಗೂ ಚಿರಾಗ್ ಜಾನಿ (90) ಮೊದಲ ವಿಕೆಟ್‌ಗೆ 140 ರನ್ ಕಲೆಹಾಕಿದರು. ಆದರೆ 11 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಸೌರಾಷ್ಟ್ರ, ತಂಡದ ಮೊತ್ತ 171 ರನ್ 4ನೇ ವಿಕೆಟ್ ಪತನಗೊಂಡಿತು. ಆದರೆ ಅನುಭವಿಗಳಾದ ಅರ್ಪಿತ್ ವಸಾವ್ಡಾ ಔಟಾಗದೆ 12, ಪ್ರೇರಕ್ ಮಂಕಡ್ ಔಟಾಗದೆ 20 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ಶ್ರೇಯಸ್ ಗೋಪಾಲ್, ಬೌಲಿಂಗ್‌ನಲ್ಲೂ ಮಿಂಚಿ 3 ವಿಕೆಟ್ ಕಿತ್ತರು.
ಸ್ಕೋರ್: ಕರ್ನಾಟಕ 372/10 (ಪಡಿಕ್ಕಲ್ 96, ಸ್ಮರಣ್ 77, ಕರುಣ್ 73, ಶ್ರೇಯಸ್ 56, ಶಿಖರ್ 41, ಧರ್ಮೇಂದ್ರ ಜಡೇಜಾ 7-124), ಸೌರಾಷ್ಟ್ರ 200/4 (ಚಿರಾಗ್ 90, ಹಾರ್ವಿಕ್ 41, ಶ್ರೇಯಸ್ 3-51, ಮೊಹ್ಸಿನ್ 1-38)