- ಚಿತ್ರದಲ್ಲಿ ದಾವೂದ್ ಚಿಂತಾಜನಕ ಎಂದು ಬಿಂಬಿತ
- ಇದನ್ನು ಸುಳ್ಳು ಮಾಡಲು ಆತನ ಜಾಲಕ್ಕೆ ಚಾಲನೆ---
-ಇತ್ತೀಚೆಗೆ ದೆಹಲಿ ಪೊಲೀಸರಿಂದ ಉಗ್ರರ ವಶ-ಮುಂಬೈನಲ್ಲಿ ಮತ್ತೆ ಸಕ್ರಿಯವಾಗಿದ್ದ ಸಂಘಟನೆ
-ಮುಂಬೈ ಬೀದಿಗಳಿಂದ ಹೊಸ ಉಗ್ರರ ನೇಮಕ
-ಭೂಗತ ಲೋಕಕ್ಕೆ ಮರುಜೀವ ನೀಡಲು ಸಿದ್ಧತೆ
-ಭಾರತದ ಪ್ರಭಾವಿ ವ್ಯಕ್ತಿಗಳ ಹತ್ಯೆಗೆ ಷಡ್ಯಂತ್ರ--
ಮುಂಬೈ: ಇತ್ತೀಚೆಗೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಉಗ್ರರು ‘ಧುರಂಧರ್’ ಚಿತ್ರದ ಯಶಸ್ಸಿಗೆ ಬೆದರಿ ಉಗ್ರಕೃತ್ಯಗಳನ್ನು ತೀವ್ರಗೊಳಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಮೂಲಗಳು ಬಹಿರಂಗಪಡಿಸಿವೆ.ಇತ್ತೀಚೆಗೆ ತೆರೆಕಂಡ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದಲ್ಲಿ ದಾವೂದ್ ಇಬ್ರಾಹಿಂನನ್ನು ಪ್ರತಿಬಿಂಬಿಸುವ ಪಾತ್ರವೊಂದನ್ನು ಚಿತ್ರಿಸಲಾಗಿದೆ. ಅದರಲ್ಲಿ ಭಾರತೀಯ ಗೂಢಚರರು ನಿಧಾನ ವಿಷವನ್ನು ದಾವೂದ್‌ಗೆ ನೀಡಿ, ಆತ ಮರಣಶಯ್ಯೆಯಲ್ಲಿರುವಂತೆ ತೋರಿಸಲಾಗಿದೆ. ಇದರಿಂದ ಬೆಚ್ಚಿದ ಉಗ್ರರು, ಆತ ಇನ್ನೂ ಬದುಕಿದ್ದಾನೆ ಎಂದು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದರು. ಹಾಗಾಗಿ ಮುಂಬೈನಲ್ಲಿ ಉಗ್ರಜಾಲಕ್ಕೆ ಮರುಜೀವ ನೀಡಿದರು ಎಂದು ಮೂಲಗಳು ತಿಳಿಸಿವೆ.ಮುಂಬೈ ಬೀದಿಗಳಿಂದ ಉಗ್ರರ ಆಯ್ಕೆ:ನೈಜ ಕಾರಣವನ್ನು ತಿಳಿಸದೆ ಮುಂಬೈನ ಬೀದಿಗಳಿಂದ ಹೊಸಬರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಯಿತು. ಬಾಂದ್ರಾ ಗರೀಬ್ ನಗರದಲ್ಲಿನ ಅಕ್ರಮ ಮಸೀದಿಯನ್ನು ತೆರವುಗೊಳಿಸಿದ ಬುಲ್ಡೋಜರ್ ಕಾರ್ಯಾಚರಣೆ ವಿರುದ್ಧ ಅವರಿಗೆ ಪ್ರಚೋದನೆ ನೀಡಲಾಯಿತು. ಹೀಗೆ ನೇಮಕ ಮಾಡಿಕೊಂಡ ಹೊಸ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ ಮೊದಲಾದ ಹೊಣೆಗಾರಿಕೆಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೊತ್ತುಕೊಂಡಿತು ಎಂದು ತಿಳಿದುಬಂದಿದೆ. ಶೂಟರ್ ಮುನ್ನಾ ಜಿಂಗಡ, ಶಕೀಲ್ ಗ್ಯಾಂಗ್ ಇತ್ಯಾದಿಗಳಿಗೆ ಉಗ್ರ ಚಟುವಟಿಕೆ ನಡೆಸಲು ವಿವಿಧ ಜವಾಬ್ದಾರಿ ನೀಡಲಾಯಿತು. ಭೂಗತ ಲೋಕದಲ್ಲಿ ದಾವೂದ್ ಪ್ರಭಾವ ಕ್ಷೀಣಿಸುತ್ತಿರುವುದರಿಂದ, ತಮ್ಮ ಅಸ್ತಿತ್ವ ಮರುಸ್ಥಾಪಿಸುವುದು ಗ್ಯಾಂಗ್‌ನ ಮೊದಲ ಉದ್ದೇಶವಾಗಿತ್ತು. ಐಎಸ್‌ಐ ಸಹಾಯದಿಂದ ಭಾರತದ ಪ್ರಬಲ ವ್ಯಕ್ತಿಗಳನ್ನು ಹತ್ಯೆ ಮಾಡುವ ಸಂಚೂ ರೂಪುಗೊಂಡಿತ್ತು ಎಂದು ಮೂಲಗಳು ಶಂಕಿಸಿವೆ.