ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ

| N/A | Published : Jul 23 2025, 12:16 PM IST

Aeroplane

ಸಾರಾಂಶ

ವಿಯೆಟ್ನಾಮ್‌ನಂತಹ ರಾಷ್ಟ್ರಗಳು ಭಾರತೀಯರ ನೆಚ್ಚಿನ ತಾಣವಾಗಿ ಬದಲಾಗಿವೆ. ಹೀಗಾಗಿಯೇ ಕಳೆದ ಐದಾರು ವರ್ಷಗಳಲ್ಲಿ ಈ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇ. 297ರಷ್ಟು ಹೆಚ್ಚಾಗಿದೆ.

ಎಸ್‌. ಗಿರೀಶ್ ಬಾಬು

 ಹೊ ಚಿ ಮಿನ್ ಸಿಟಿ (ವಿಯೆಟ್ನಾಮ್‌) :  ರಷ್ಯಾ-ಉಕ್ರೇನ್, ಇಸ್ರೇಲ್- ಇರಾನ್‌ನಂತಹ ಜಾಗತಿಕ ತಲ್ಲಣಗಳ ಹೆಚ್ಚಳವು ಭಾರತೀಯ ಪ್ರವಾಸಿಗರ ಆದ್ಯತೆ ಬದಲಿಸಿದ್ದು, ಯುಎಸ್, ಯುರೋಪ್, ಆಸ್ಟ್ರೇಲಿಯಾದಂತಹ ನೆಚ್ಚಿನ ತಾಣಗಳ ಬದಲಿಗೆ ಸ್ನಿಗ್ಧ ಪ್ರಕೃತಿ ಸೌಂದರ್ಯ ಹಾಗೂ ಐಷಾರಾಮಿ ನಗರ ಬದುಕಿನ ಸಮ್ಮಿಶ್ರಣ ಹೊಂದಿರುವ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳತ್ತ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.

ಇದರ ಪರಿಣಾಮ- ಬೆಳಗಿನಲ್ಲಿ ಹಸಿರು ಹೊದ್ದು ಮಲಗುವ ಹಾಗೂ ರಾತ್ರಿಗಳಲ್ಲಿ ಜಗ್ಗನೆದ್ದು ಝಗಮಗಿಸುವ ಹೈಟೆಕ್ ನಗರ ಜೀವನ ಹೊಂದಿರುವ ವಿಯೆಟ್ನಾಮ್‌ನಂತಹ ರಾಷ್ಟ್ರಗಳು ಭಾರತೀಯರ ನೆಚ್ಚಿನ ತಾಣವಾಗಿ ಬದಲಾಗಿವೆ. ಹೀಗಾಗಿಯೇ ಕಳೆದ ಐದಾರು ವರ್ಷಗಳಲ್ಲಿ ಈ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇ. 297ರಷ್ಟು ಹೆಚ್ಚಾಗಿದೆ.

ಭಾರತೀಯರು ಅದರಲ್ಲೂ ದಕ್ಷಿಣ ಭಾರತೀಯರ ಈ ಪ್ರವಾಸೋತ್ಸಾಹವನ್ನು ಮನಗಂಡ ವಿಯೆಟ್ನಾಮ್ ಮೂಲದ ಖಾಸಗಿ ವಿಮಾನ ಯಾನ ಸಂಸ್ಥೆಯಾದ ‘ವಿಯೆಟ್ ಜೆಟ್’, ಬೆಂಗಳೂರು- ಹೊ ಚಿ ಮಿನ್ ಸಿಟಿ ನಡುವೆ ವಾರದಲ್ಲಿ ಮೂರು ದಿನ ನೇರ ವಿಮಾನಯಾನ ಸೇವೆಯನ್ನು ಇದೀಗ ಆರಂಭಿಸಿದೆ.

ಈ ಮಾರ್ಗವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಕಾರ್ಯನಿರ್ವಹಿಸುತ್ತಿದೆ. ಜು.20ರಿಂದ ಈ ಸಂಖ್ಯೆಯು ಮೂರರಿಂದ ನಾಲ್ಕಕ್ಕೂ ಹೆಚ್ಚಳವಾಗಿದೆ ಎಂದು ವೈಮಾನಿಕ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಈ ವಿಮಾನವು ಹೊ ಚಿ ಮಿನ್ ಸಿಟಿಯಿಂದ ಸಂಜೆ 7.10ಕ್ಕೆ ಹೊರಟು ಬೆಂಗಳೂರನ್ನು ರಾತ್ರಿ 10.30ಕ್ಕೆ ತಲುಪುತ್ತದೆ ಮತ್ತು ಅದೇ ದಿನ ರಾತ್ರಿ ಬೆಂಗಳೂರಿನಿಂದ 11.30ಕ್ಕೆ ಹೊರಡುವ ಈ ವಿಮಾನವು ಹೊ ಚಿ ಮಿನ್ ಸಿಟಿಯನ್ನು ಮರು ದಿನ ಬೆಳಗಿನ ಜಾವ 5.55ಕ್ಕೆ ತಲುಪುತ್ತದೆ.

ಇತ್ತೀಚೆಗಷ್ಟೇ ಹೈದರಾಬಾದ್- ಹೊ ಚಿ ಮಿನ್ ಸಿಟಿ ನಡುವೆ ವಾರದಲ್ಲಿ ಎರಡು ದಿನ (ಮಂಗಳವಾರ ಹಾಗೂ ಶನಿವಾರ) ನೇರ ವಿಮಾನಯಾನ ಸೇವೆ ಆರಂಭಿಸಿದ್ದ ವಿಯೆಟ್ ಜೆಟ್ ಇದೀಗ ಬೆಂಗಳೂರು ಹಾಗೂ ವಿಯೆಟ್ನಾಮ್ ರಾಜಧಾನಿ ನಡುವೆ ನೇರ ವೈಮಾನಿಕ ಸೇವೆ ಕಲ್ಪಿಸಿದೆ.

ಭಾರತೀಯರ ಪ್ರವಾಸೋತ್ಸಾಹ:

2019ರಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ವಿಯೆಟ್‌ಜೆಟ್, ಈವರೆಗೆ 1.9 ದಶಲಕ್ಷಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು ವಿಯೆಟ್ನಾಮ್‌ನ ರಮ್ಯ ಪ್ರವಾಸಿ ತಾಣಗಳತ್ತ ಒಯ್ದಿದೆ. 2019ರಲ್ಲಿ ನೇರ ವಿಮಾನಯಾನ ಮೂಲಕ ಭಾರತೀಯ ಪ್ರವಾಸಿಗರು ವಿಯೆಟ್ನಾಮ್‌ಗೆ ಭೇಟಿ ಆರಂಭಿಸಿದ್ದು, ಆ ವರ್ಷ 1.69 ಲಕ್ಷ ಪ್ರವಾಸಿಗರು ಈ ದೇಶಕ್ಕೆ ಭೇಟಿ ನೀಡಿದ್ದರು. ಅನಂತರದ ಎರಡು ವರ್ಷ ಪ್ರವಾಸೋದ್ಯಮ ಕುಸಿದಿತ್ತು. 2022ರಲ್ಲಿ ಮತ್ತೆ ಪ್ರವಾಸದ ಸಂಚಲನ ಆರಂಭಗೊಂಡಾಗ ಆ ವರ್ಷ 1.38 ಲಕ್ಷ ಭಾರತೀಯರು ಈ ಕಡಲ ತೀರದ ದೇಶಕ್ಕೆ ಭೇಟಿ ನೀಡಿದ್ದರು. ಅನಂತರ ವಿಯೆಟ್ನಾಮ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಭಾರಿ ಏರಿಕೆ ಕಂಡಿದ್ದು, 2023ರಲ್ಲಿ 3.92 ಲಕ್ಷ ಹಾಗೂ 2024ರಲ್ಲಿ 5.01 ಲಕ್ಷ ಜನರು ವಿಯೆಟ್ನಾಮ್‌ ಗೆ ಭೇಟಿ ನೀಡಿದ್ದರು. ಈ ಪ್ರವಾಸೋತ್ಸಾಹವು ಈ ವರ್ಷವೂ ದೊಡ್ಡ ಪ್ರಮಾಣದಲ್ಲೇ ಮುಂದುವರೆದಿದೆ.

ಇದೀಗ ದಿಲ್ಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಅನ್ನು ವಿಯೆಟ್ನಾಮ್‌ನ ಪ್ರಮುಖ ನಗರಗಳಾದ ಹೊ ಚಿ ಮಿನ್ ಸಿಟಿ, ಹಾನಾಯ್ ಮತ್ತು ಡಾ ನಾಂಗ್‌ಗೆ ನೇರವಾಗಿ ಸಂಪರ್ಕಿಸುತ್ತಿದೆ. ಒಟ್ಟು 10 ನೇರ ಮಾರ್ಗಗಳೊಂದಿಗೆ ವಾರಕ್ಕೆ 78 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ಇತ್ತೀಚೆಗೆ ಈ ವರದಿಗಾರ ಹೊ ಚಿ ಮಿನ್ ಸಿಟಿ ಹಾಗೂ ವುಂಗ್ ತಾವು ತೀರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಯೆಟ್‌ಜೆಟ್‌ನ ಸಮಯಪಾಲನೆ, ಸ್ನೇಹಪೂರ್ಣ ಸಿಬ್ಬಂದಿ ಮತ್ತು ಆಧುನಿಕ ವಿಮಾನ ಸೇವೆಗಳು ಅತ್ಯುತ್ತಮವಾಗಿದ್ದದ್ದು ಅನುಭವಕ್ಕೆ ಬಂತು. ವಿಯೆಟ್ ಜೆಟ್ ಸಂಸ್ಥೆಯು ಈಗಾಗಲೇ 117 ಇಂಧನ ದಕ್ಷ ಏರ್ ಬಸ್ ವಿಮಾನಗಳನ್ನು ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ 400 ಹೊಸ ವಿಮಾನಗಳ ಖರೀದಿಗೆ ಆದೇಶ ನೀಡಿದೆ. ವಿಯೆಟ್‌ಜೆಟ್‌ ಸಂಸ್ಥೆಯು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ IATAಯಿಂದ IOSA ಪ್ರಮಾಣಪತ್ರ ಮತ್ತು ಗರಿಷ್ಠ 7-ಸ್ಟಾರ್ ಸುರಕ್ಷತಾ ಮಾನ್ಯತೆ ಪಡೆದುಕೊಂಡಿದೆ.

ಕಡಿಮೆ ದರ, ಸುಸಜ್ಜಿತ ವಿಮಾನ ಯಾನ ಸೌಕರ್ಯ ಮತ್ತು ಸುರಕ್ಷಿತ ಸೇವೆಯೊಂದಿಗೆ ವಿಯೆಟ್‌ಜೆಟ್ ಏಷ್ಯಾದ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದೆ. ಬೆಂಗಳೂರಿನ ಪ್ರಯಾಣಿಕರಿಗೂ ಇದು ವಿಯೆಟ್ನಾಂ ಮತ್ತು ಅದರ ಸುತ್ತಮುತ್ತಲಿರುವ ಅತ್ಯುದ್ಭುತ ಪ್ರವಾಸ ತಾಣ ಹೊಂದಿರುವ ದೇಶಗಳಾದ ಆಸ್ಟ್ರೇಲಿಯಾ, ಬಾಲಿ, ಕೌಲಲಂಪುರ್, ಸಿಂಗಾಪುರ ತಲುಪಲು ಹೊಸ ಅವಕಾಶದ ಹಾದಿ ತೆರೆದಿದೆ.

11 ರು.ಗೆ ವಿಯೆಟ್ನಾಮ್‌ಗೆ ಭೇಟಿ ನೀಡಿ

ಭಾರತೀಯರನ್ನು ತನ್ನತ್ತ ಸೆಳೆಯಲು ವಿಯೆಟ್ ಜೆಟ್‌ ಸಂಸ್ಥೆಯು ಕೇವಲ 11 ರು.ಗೆ ವಿಮಾನಯಾನ ಸೌಲಭ್ಯ ನೀಡುವ ವಿನೂತನ ಕೊಡುಗೆಯೊಂದನ್ನು ಪರಿಚಯಿಸುತ್ತಿದೆ.

ಮುಂಗಾರು ಅ‍ವಧಿಗಾಗಿಯೇ ನೀಡಲಾಗುತ್ತಿರುವ ಈ ವಿಶೇಷ ಸೌಲಭ್ಯದ ಪ್ರಕಾರ, ವಿಯೆಟ್ನಾಮ್‌ ದೇಶದ ಹೊ ಚಿ ಮಿನ್ ಸಿಟಿ, ಹನಾಯ್‌ ಮತ್ತು ಡ ನಾಂಗ್‌ ನಗರಗಳಿಗೆ ಭಾರತದ ಬೆಂಗಳೂರು, ದೆಹಲಿ, ಅಹಮದಾಬಾದ್, ಕೊಚ್ಚಿ, ಹೈದರಾಬಾದ್‌ ನಗರಗಳಿಂದ ನಿಗದಿತ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ. ಅಂದರೆ, 2025ರ ಸೆಪ್ಟೆಂಬರ್‌ನಿಂದ 2026 ವರ್ಷ ಮೇ ಮಾಸದೊಳಗೆ ಈ ನಗರಗಳಿಗೆ ಪ್ರಯಾಣಿಸಲು ಮುಂಗಡ ಟಿಕೆಟ್ ಬುಕ್ ಮಾಡಿಕೊಳ್ಳಬೇಕು ಮತ್ತು ಮುಂಗಡ ಟಿಕೆಟ್ ಅನ್ನು ಜು. 23 ರಿಂದ 25 ಈ ಮೂರು ದಿನಗಳೊಳಗೆ ಬುಕ್ಕಿಂಗ್‌ ಮಾಡಿಕೊಂಡರೆ 11 ರು.ಗೆ ವಿಯೆಟ್ನಾಮ್ ಪ್ರವಾಸ ಮಾಡಬಹುದು.

ಗಮನಿಸಿ- 11 ರು. ವಿಮಾನಯಾನ ಸಂಸ್ಥೆಯು ನಿಮಗೆ ನೀಡುವ ರಿಯಾಯ್ತಿ ದರ. ಇದರ ಜತೆಗೆ, ವಿಮಾನಯಾನ ಟಿಕೆಟ್‌ಗೆ ಸಂಬಂಧಿಸಿದ ತೆರಿಗೆ ಹಾಗೂ ಫೀಗಳನ್ನು ನೀವು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ www.vietjetair.com ನೋಡಬಹುದು.

Read more Articles on