ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಇತಿಹಾಸ - ಸಂಸ್ಕೃತಿಯ ಬಗ್ಗೆ ಕನ್ನಡದಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.ಮಂಗಳವಾರ ಇಲ್ಲಿನ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೇಲೂರು, ಹಳೆಬೀಡಿನಂತಹ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿಯೇ ಅಲ್ಲಿನ ಇತಿಹಾಸದ ಬಗ್ಗೆ ಕನ್ನಡದಲ್ಲಿ ಮಾಹಿತಿ ಫಲಕಗಳಿಲ್ಲ. ನಮ್ಮ ರಾಜ್ಯಕ್ಕೆ ಗಣಪತಿಯ ಪ್ರವೇಶ ಆಗಿರುವ ಅನೆಗುಡ್ಡೆ, ಕುಂಭಾಶಿ, ಮದವೂರು ಮುಂತಾದ ದೇವಾಲಯಗಳಲ್ಲಿ ಕೇಂದ್ರ ಸರ್ಕಾರದಿಂದ ಸಂರಕ್ಷಿತಾ ಸ್ಮಾರಕಗಳು ಎಂಬ ಫಲಕ ಇದೆ, ಆದರೆ ಅಲ್ಲಿನ ವಿಶೇಷಗಳ ಬಗ್ಗೆ ಮಾಹಿತಿಗಳಿಲ್ಲ. ಇದರಿಂದ ಕನ್ನಡಿಗರಿಗೇ ಅಲ್ಲಿನ ಬಗ್ಗೆ ಮಾಹಿತಿ ಇಲ್ಲ. ಅಲ್ಲಿರುವ ಇಂಗ್ಲಿಷ್, ಹಿಂದಿ ಮಾಹಿತಿ ಫಲಕಗಳ ಜೊತೆಗೆ ಕನ್ನಡದಲ್ಲಿಯೂ ಫಲಕ ಅಳವಡಿಸುವಂತೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೂ ಮನವಿ ಮಾಡಿರುವುದಾಗಿ ಬಿಳಿಮಲೆ ಹೇಳಿದರು.ಶಾಲೆ ಹೆಸರಿಗೆ ಖಾತೆ ಮಾಡಿ:
ರಾಜ್ಯದಲ್ಲಿ 17 ಸಾವಿರಕ್ಕೂ ಹೆಚ್ಚು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿವೆ, ಅವುಗಳಲ್ಲಿ 3 ಸಾವಿರಕ್ಕೂ ಅಧಿಕ ಶತಮಾನ ಕಂಡ ಶಾಲೆಗಳಿವೆ. ಅವುಗಳಿಗೆ ದಾನಿಗಳು ನೀಡಿದ ಎಕ್ರೆಗಟ್ಟಲೆ ಭೂಮಿ ಇದೆ, ಆದರೆ, ಈ ಭೂಮಿಯ ಖಾತೆ ಮಾತ್ರ ಶಾಲೆಯ ಹೆಸರಿಗೆ ಇನ್ನೂ ಆಗಿಲ್ಲ. ಆದ್ದರಿಂದ ಬಹುತೇಕ ಶಾಲೆಗಳ ಭೂಮಿ ಅತಿಕ್ರಮಣಕ್ಕೊಳಗಾಗುತ್ತಿದೆ. 7 ಸಾವಿರ ಶಾಲೆಗಳಲ್ಲಿ ಈಗ 10ಕ್ಕಿಂತ ವಿದ್ಯಾರ್ಥಿಗಳಿದ್ದಾರೆ, ಅವು ಮುಂದಿನ ವರ್ಷ ಮುಚ್ಚತ್ತವೆ, ಆಗ ಅವುಗಳು ಭೂಮಿ ಕೂಡ ಯಾರ್ಯಾರದ್ದೋ ಪಾಲಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಶಾಲೆಯ ಜಮೀನಿನ ಖಾತೆಗಳನ್ನು ತಕ್ಷಣ ಆಯಾ ಶಾಲೆಯ ಹೆಸರಿಗೆ ಮಾಡಬೇಕು ಎಂದರು. ಉಡುಪಿ ಜಿಲ್ಲೆಯಲ್ಲಿ ಭೂಮಿ ಖಾತೆಯಾಗದ ಕೇವಲ 8 ಶಾಲೆಗಳು ಮಾತ್ರ ಇವೆ, ಉಳಿದೆಲ್ಲಾ ಶಾಲೆಗಳ ಭೂಮಿಯ ಖಾತೆಗಳಾಗಿವೆ ಎಂದವರು ಶ್ಲಾಘಿಸಿದರು.ಕನ್ನಡ, ತುಳುವೂ ಇರಲಿ:
ಸಭೆಯಲ್ಲಿ ಮಣಿಪಾಲದ ಬಹುತೇಕ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಇಲ್ಲ ಎಂಬ ದೂರು ಬಂದಿದೆ. ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂಬ ನಿಯಮ ಇದೆ, ಈ ನಿಮಯ ಪಾಲಿಸದ ಅಂಗಡಿಗಳ ಪರವಾನಗಿ ನವೀಕರಿಸದಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂಗಡಿ ಹೆಸರನ್ನು ಕನ್ನಡ ಇಂಗ್ಲಿಷ್ ಗಳ ಜೊತೆ ಸಾಧ್ಯವಿದ್ದರೆ ಇಲ್ಲಿನ ಸ್ಥಳೀಯ ಆಡು ಭಾಷೆ ತುಳುವಿನಲ್ಲಿಯೂ ಬರೆಯಿರಿ ಎಂದವರು ಸಲಹೆ ಮಾಡಿದರು.
ಕೆಡಿಪಿ ಸಭೆಯಲ್ಲಿ ಕನ್ನಡ: ಜಿಲ್ಲಾ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳಲ್ಲಿ ಕನ್ನಡ ಅನುಷ್ಠಾನ ವಿಷಯ ಕೂಡ ಚರ್ಚೆ ಆಗುತ್ತದೆ, ಆದರೆ ಈ ವಿಷಯವನ್ನು ಸಭೆಯ ಕೊನೆಯಲ್ಲಿಟ್ಟಿರುತ್ತಾರೆ, ಈ ವಿಷಯ ಚರ್ಚೆಗೆ ಬರುವಾಗ ಒಂದೋ ಸಮಯಾವಕಾಶ ಇರುವುದಿಲ್ಲ ಅಥವಾ ಜನಪ್ರತಿನಿಧಿಗಳು ಎದ್ದು ಹೋಗಿರುತ್ತಾರೆ, ಕನ್ನಡ ಅನುಷ್ಠಾನದ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ, ಆದ್ದರಿಂದ ಇನ್ನು ಮುಂದೆ ಕನ್ನಡ ಅನುಷ್ಠಾನ ವಿಷಯವನ್ನು ಸಭೆಯ ಆರಂಭದಲ್ಲಿಯೇ ಚರ್ಚಿಸಬೇಕು ಎಂದವರು ಜಿಲ್ಲಾಧಿಕಾರಿಗೆ ಸೂಚಿಸಿದರು.ರಾ. ಶಿ. ನೀತಿ ಚೆನ್ನಾಗಿದೆ: ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಹಳ ಚೆನ್ನಾಗಿದೆ. ಅದರಲ್ಲಿ ಎರಡು ಭಾಷೆಗಳ ಜೊತೆಗೆ ಸ್ಥಳೀಯ ಭಾಷೆಯ ಕಲಿಕೆಗೂ ಅವಕಾಶ ಇದೆ. ಆದರೆ ರಾಜ್ಯ ಸರ್ಕಾರ ಪ್ರತ್ಯೇಕ ಕರ್ನಾಟಕ ಶಿಕ್ಷಣ ನೀತಿ ರೂಪಣೆಗೆ ಸಮಿತಿ ರಚಿಸಿದೆ. ಆದ್ದರಿಂದ ನಾವು ಪ್ರತ್ಯೇಕ ಭಾಷಾ ನೀತಿಯನ್ನು ಶಿಫಾರಸು ಮಾಡುತ್ತಿಲ್ಲ, ಸರ್ಕಾರದ ಸಮಿತಿ ವರದಿ ನೀಡಲಿ, ಆಮೇಲೆ ನೋಡೋಣ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಸಂತೋಷ್ ಹನಗೆರೆ, ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ಡಿಸಿ ಸ್ವರೂಪ ಟಿ.ಕೆ., ಕನ್ನಡ - ಸಂಸ್ಕೃತಿ ಇಲಾಖೆಯ ಸ.ನಿರ್ದೇಶಕಿ ಪೂರ್ಣಿಮಾ ಇದ್ದರು.
..................ಕನ್ನಡ ಭಾಷೆಯಲ್ಲಿ ಫೇಲ್: 3 ತಿಂಗಳಲ್ಲಿ ಸರ್ಕಾರಕ್ಕೆ ವರದಿಉಡುಪಿ, ದ.ಕ. ಜಿಲ್ಲೆಗಳಲ್ಲಿ ಮನೆ ಭಾಷೆ ತುಳು, ಕೊಂಕಣಿ, ಬ್ಯಾರಿ ಆಗಿದ್ದರೂ, ಇಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಫೇಲಾದವರು ತುಂಬಾ ಕಡಿಮೆ ಇದ್ದಾರೆ, ಅದೇ ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಮನೆಭಾಷೆ, ಮಾತೃ ಭಾಷೆ, ಶಿಕ್ಷಣದ ಭಾಷೆ ಕನ್ನಡ ಆಗಿದ್ದರೂ ಕನ್ನಡದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಫೇಲಾಗುತಿದ್ದಾರೆ ಎಂದು ಬಿಳಿಮಲೆ ಕಳವಳ ವ್ಯಕ್ತಪಡಿಸಿದರು. ಈ ಎರಡೂ ವಿಷಯಗಳ ಅಧ್ಯಯನಾತ್ಮಕ ವರದಿಯೊಂದನ್ನು 3 ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಿ, ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲಾಗುವುದು ಎಂದು ಬಿಳಿಮಲೆ ಹೇಳಿದರು.