ಸಾರಾಂಶ
ಟೊರಂಟೋ: ಭಾರತದ ವಿರುದ್ಧ ಖಲಿಸ್ತಾನಿ ಸಿಖ್ಖರ ವಿಚಾರಕ್ಕೆ ಜಗಳ ಕಾದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಗ್ಗೆ ಇದೀಗ ಸ್ವಪಕ್ಷದಲ್ಲೇ ಅಸಮಾಧಾನ ತಲೆಯೆತ್ತಿದ್ದು, ಅವರು ರಾಜೀನಾಮೆ ನೀಡುವಂತೆ ಲಿಬರಲ್ ಪಕ್ಷದ 20 ಸಂಸದರು ಒತ್ತಡ ಹೇರುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಟೊರಂಟೊ ಹಾಗೂ ಮಾಂಟ್ರಿಯಲ್ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದ ಬೆನ್ನಲ್ಲೇ ಕೆಲ ಸಂಸದರು ರಹಸ್ಯ ಸಭೆಗಳನ್ನು ನಡೆಸಿದ್ದು, ಟ್ರುಡೋ ರಾಜೀನಾಮೆಗೆ ಆಗ್ರಹಿಸುವ ಪತ್ರಕ್ಕೆ 20 ಸಂಸದರು ಸಹಿ ಮಾಡಿದ್ದಾರೆ.
ಕೆನಡಾದಲ್ಲಿರುವ ಭಾರತ ವಿರೋಧಿ ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡಿ, ಅಲ್ಲಿನ ಹಿಂದೂಗಳು ಹಾಗೂ ಭಾರತದ ದೂತವಾಸದ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಡೆಯದೇ ಟ್ರುಡೋ ಸುಮ್ಮನಿದ್ದಾರೆ. ಖಲಿಸ್ತಾನಿಗಳನ್ನು ಮತಕ್ಕಾಗಿ ಓಲೈಸುತ್ತಿದ್ದಾರೆ. ಇದು ಭಾರತ-ಕೆನಡಾ ಸಂಬಂಧ ಹಳಸಲು ಕಾರಣವಾಗಿದೆ.
==
ಉತ್ತರಾಖಂಡ: ಖಾಲಿ ಸಿಲಿಂಡರ್ ಇಟ್ಟು ರೈಲು ಹಳಿ ತಪ್ಪಿಸಲು ಯತ್ನ
ರೂರ್ಕಿ (ಉತ್ತರಾಖಂಡ): ದೇಶದಲ್ಲಿ ಹೆಚ್ಚಾಗಿರುವ ರೈಲು ಹಳಿ ತಪ್ಪಿಸುವ ಯತ್ನಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಉತ್ತರಾಖಂಡದ ರೂರ್ಕಿಯಲ್ಲಿ ಹಳಿಯ ಮೇಲೆ ಖಾಲಿ ಸಿಲಿಂಡರ್ ಪತ್ತೆಯಾಗಿದೆ. ಅದೇ ಮಾರ್ಗವಾಗಿ ಬಂದ ಗೂಡ್ಸ್ ರೈಲಿನ ಚಾಲಕ ಸಿಲಿಂಡರ್ ಕಂಡು ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದೆ. ಬೆಳಗ್ಗೆ 6:35ರ ಸುಮಾರಿಗೆ ಢಂಡೇರಾ ಹಾಗೂ ಲಂದೌರಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು, ಸಿಲಿಂಡರ್ ಅನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ. ಆಗಸ್ಟ್ ತಿಂಗಳಿಂದ ಇಂಥ 18 ರೈಲು ಹಳಿತಪ್ಪಿಸುವ ಸಂಚು ನಡೆದಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
==
ಟಾಟಾ ಭಾರತ - ಇಸ್ರೇಲ್ ಸ್ನೇಹದ ಚಾಂಪಿಯನ್: ನೆತನ್ಯಾಹು
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಟಾಟಾ ಸಂಸ್ಥೆ ದಿಗ್ಗಜ ರತನ್ ಟಾಟಾ ಸಾವಿಗೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ‘ರತನ್ ಟಾಟಾ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹಕ್ಕೆ ಚಾಂಪಿಯನ್’ ಎಂದು ನೆತನ್ಯಾಹು ಬಣ್ಣಿಸಿದ್ದಾರೆ.ಅ.9ರಂದು ನಿಧನರಾದ ಟಾಟಾ ಸಾವಿಗೆ ಸಂತಾಪ ಸೂಚಿಸಿ ಮೋದಿಗೆ ಪತ್ರ ಬರೆದಿರುವ ನೆತನ್ಯಾಹು, ‘ಭಾರತದ ಹೆಮ್ಮೆಯ ಪುತ್ರ, ಭಾರತ ಮತ್ತು ನಮ್ಮ ದೇಶದ ಸ್ನೇಹಕ್ಕೆ ಚಾಂಪಿಯನ್ ಆಗಿದ್ದ ರತನ್ ನಾವಲ್ ಟಾಟಾ ನಿಧನಕ್ಕೆ ನಾನು ಮತ್ತು ಇಸ್ರೇಲ್‌ನ ಜನರು ಸಂತಾಪ ವ್ಯಕ್ತ ಪಡಿಸುತ್ತಿದ್ದೇವೆ. ರತನ್ ಕುಟುಂಬಕ್ಕೆ ನನ್ನ ಸಂತಾಪ ತಿಳಿಸಿ’ ಎಂದಿದ್ದಾರೆ.
==
ಆಸ್ಪತ್ರೆಗೆ ಮೃತ ಪ್ರೊ। ಸಾಯಿಬಾಬಾ ಅವರ ದೇಹದಾನ
ಹೈದರಾಬಾದ್: ಶನಿವಾರ ಇಲ್ಲಿ ನಿಧನರಾದ ದೆಹಲಿ ವಿಶ್ವವಿದ್ಯಾಲಯ ನಿವೃತ್ತ ಪ್ರೊ.ಜಿ.ಎನ್.ಸಾಯಿಬಾಬಾ ಅವರ ದೇಹವನ್ನು ಅವರ ಬಯಕೆಯಂತೆ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಅವರ ಕುಟುಂಬ ಭಾನುವಾರ ಹೇಳಿದೆ.ಮಾವೋವಾದಿ ಪ್ರಕರಣದಲ್ಲಿ ಬಂಧಿಯಾಗಿದ್ದ ಅವರು 10 ವರ್ಷ ನಂತರ ಆರೋಪ ಮುಕ್ತರಾಗಿ ಕಳೆದ ಮಾರ್ಚ್‌ನಲ್ಲಿ ನಾಗ್ಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದರು.
ದರ್ಶನಕ್ಕೆ ಸೋಮವಾರ ಅವರ ದೇಹವನ್ನು ಹೈದರಾಬಾದ್‌ನ ಜವಾಹರ್ ನಗರದಲ್ಲಿ ಇರಿಸಲಾಗುವುದು. ಬಳಿಕ ಆಸ್ಪತ್ರೆಗೆ ದೇಹದಾನ ಮಾಡಲಾಗುವುದು. ಅವರ ಕಣ್ಣುಗಳನ್ನು ಈಗಾಗಲೇ ಎಲ್‌ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ನೀಡಲಾಗಿದೆ ಎಂದು ಕುಟುಂಬ ಹೇಳಿದೆ.ಸಾಯಿಬಾಬಾ ದಿಲ್ಲಿ ವಿವಿಯ ರಾಮ್ ಲಾಲ್ ಆನಂದ್ ಕಾಲೇಜಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದರು. ಆದರೆ ಮಾವೋವಾದಿ ನಂಟಿನ ಕಾರಣ 10 ವರ್ಷದ ಹಿಂದೆ ಬಂಧಿಯಾಗಿದ್ದರು.
ಸಾವಿಗೆ ಸರ್ಕಾರ ಕಾರಣ- ಸಂಘಟನೆಗಳು:ಈ ನಡುವೆ, ಜೈಲಿನಲ್ಲಿ ಅವರ ಕಾಯಿಲೆಗಳಿಗೆ ಸರ್ಕಾರದಿಂದ ಸೂಕ್ತ ಉಪಚಾರ ಸಿಕ್ಕಿರಲಿಲ್ಲ. ಇದೇ ಅವರ ಆರೋಗ್ಯ ಹದಗೆಟ್ಟು ಸಾವಿವೀಡಾಗಲು ಕಾರಣವಾಯಿತು ಎಂದು ಕೆಲವು ಪ್ರಗತಿಪರ ಸಂಘಟನೆಗಳು ಆರೋಪಿಸಿವೆ.
==
ಬಂಗಾಳದಲ್ಲಿ ಮತ್ತೊಂದು ಆಸ್ಪತ್ರೆ ಮೇಲೆ ದುಷ್ಕರ್ಮಿಗಳ ದಾಳಿ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ದಕ್ಷಿಣ ಕೋಲ್ಕತಾದ ಸರ್ಕಾರಿ ಸ್ವಾಮ್ಯದ ಎಸ್.ಎಸ್.ಕೆ.ಎಂ ಮೆಡಿಕಲ್ ಆಸ್ಪತ್ರೆಗೆ ದುಷ್ಕರ್ಮಿಗಳ ತಂಡವೊಂದು ನುಗ್ಗಿ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದೆ.ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಬಂದ ಸುಮಾರು 15 ಜನರ ಗುಂಪು ಆಸ್ಪತ್ರೆಗೆ ನುಗ್ಗಿ ಹಾಕಿ ಸ್ಟಿಕ್, ವಿಕೆಟ್‌ಗಳಿಂದ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನ್ನು ಧ್ವಂಸಗೊಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಲ್ಲದೇ ಘಟನೆಯಲ್ಲಿ ರೋಗಿ ಸಂಬಂಧಿಯೊಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ. ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಘಟನೆ ಬಳಿಕ ಪೊಲೀಸರು ಆಸ್ಪತ್ರೆಗೆ ಭದ್ರತೆ ಹೆಚ್ಚಿಸಿದ್ದಾರೆ.ಆರ್‌ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆ ರೇಪ್ ಖಂಡಿಸಿ ಕೆಲ ಕಿರಿಯ ವೈದ್ಯರು ಅಮರಣ ಉಪವಾಸ ಕೈಗೊಂಡಿರುವ 5 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ.