ಸಾರಾಂಶ
ಮುಂಬೈ: 2020ರಲ್ಲಿ ಸಂಭವಿಸಿದ ದಿ। ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವು ಆತ್ಮಹತ್ಯೆಯೇ ವಿನಾ ಕೊಲೆಯಲ್ಲ. ಅವರ ಸಾವಿನಲ್ಲಿ ಯಾವುದೇ ಅಸಹಜ ನಡೆ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2020ರ ಜೂ.14ರಂದು ಸಾವನ್ನಪ್ಪಿದ್ದರು. ಅವರ ಸಾವಿನ ಬೆನ್ನಲ್ಲೆ, ಜೂ.8ರಂದು ಅವರ ವ್ಯವಸ್ಥಾಪಕಿ ದಿಶಾ ಸಾಲಿಯಾನ್ ವಸತಿ ಕಟ್ಟಡದ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ತನ್ನ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾರೆ. ಇದರ ಹಿಂದೆ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೈವಾಡವಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ದಿಶಾ ತಂದೆ ಸತೀಶ್ ಸಾಲಿಯನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಮುಂಬೈ ಪೊಲೀಸರು, ‘ದಿಶಾ ಸಾಲಿಯನ್ ಕೌಟುಂಬಿಕ ಸಮಸ್ಯೆ ಮತ್ತು ವ್ಯವಹಾರಗಳು ಸರಿಯಾಗಿ ನಡೆಯದ ಕಾರಣ ತೀವ್ರ ಮಾನಸಿಕ ಒತ್ತಡದಲ್ಲಿದ್ದರು. ಸ್ವಂತ ಇಚ್ಛೆಯಿಂದ ಫ್ಲಾಟ್‌ನ ಕಿಟಕಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಮರಣೋತ್ತರ ವರದಿಯಲ್ಲಿ ಆಕೆಯ ದೇಹದ ಮೇಲೆ ಲೈಂಗಿಕ ಅಥವಾ ದೈಹಿಕ ಹಲ್ಲೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ’ ಎಂದು ತಿಳಿಸಿದ್ದಾರೆ.
ಬಿಗಿ ಭದ್ರತೆ ಮಧ್ಯೆ ಅಮರನಾಥ ಯಾತ್ರೆ ಆರಂಭ
ಶ್ರೀನಗರ: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ನಿಸರ್ಗ ನಿರ್ಮಿತ ಹಿಮಲಿಂಗದ ದರ್ಶನ ಪಡೆಯುವ ಅಮರನಾಥ ಯಾತ್ರೆ ಗುರುವಾರ ಮುಂಜಾನೆ ಬಿಗಿ ಭದ್ರತೆಯಲ್ಲಿ ಆರಂಭವಾಗಿದೆ.ಸೋನ್‌ಮಾರ್ಗ್‌ನ ಬಲ್ತಾಲ್ ಮತ್ತು ಪಹಲ್ಗಾಂನ ನುನ್‌ವಾನದ ಬೇಸ್ ಕ್ಯಾಂಪ್‌ಗಳಿಂದ ಮೊದಲ ಬ್ಯಾಚ್ ಭಕ್ತಾದಿಗಳು 3880 ಮೀಟರ್ ಎತ್ತರದ ಪವಿತ್ರಸ್ಥಳದತ್ತ ಹೊರಟಿದ್ದಾರೆ.
ಮಹಿಳೆಯರು, ಪುರುಷರು, ಸಾಧುಗಳನ್ನೊಳಗೊಂಡ ಯಾತ್ರಿಗಳ ಗುಂಪು ‘ಬಂ ಬಂ ಭೋಲೇ’ ಘೋಷಣೆಗಳನ್ನು ಕೂಗುತ್ತಾ, ಹೊರಟಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳು ಚಾಲನೆ ನೀಡಿದ್ದಾರೆ.ಬಿಗಿ ಭದ್ರತೆ:ಕಾಶ್ಮೀರವು ಸೂಕ್ಷ್ಮ ಪ್ರದೇಶವಾಗಿದ್ದು, ಏಪ್ರಿಲ್‌ನಲ್ಲಿ ಯಾತ್ರೆ ಸಾಗುವ ಪಹಲ್ಗಾಂನಲ್ಲಿ ಉಗ್ರ ದಾಳಿ ನಡೆದಿದ್ದ ಕಾರಣ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾವಿರಾರು ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಇತರ ಅರೆಸೈನಿಕ ಪಡೆಗಳಿ ಭದ್ರತಾ ಸಿಬ್ಬಂದಿಯನ್ನು ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ನಿಯೋಜಿಸಲಾಗಿದೆ. ಜತೆಗೆ ವೈಮಾನಿಕ ಕಣ್ಗಾವಲನ್ನೂ ಇಡಲಾಗಿದೆ.
ಯಾತ್ರೆಗೆ 3.5 ಲಕ್ಷ ಭಕ್ತರು ಯಾತ್ರೆಗೆ ನೋಂದಾಯಿಸಿದ್ದು, ಆ.9ರಂದು ಮುಕ್ತಾಯವಾಗಲಿದೆ.
ಸುದೀರ್ಘ ಬಾಹ್ಯಾಕಾಶ ವಾಸ: ಶರ್ಮಾ ಹಿಂದಿಕ್ಕಿ ಶುಕ್ಲಾ ದಾಖಲೆ
ನವದೆಹಲಿ: ಬಾಹ್ಯಾಕಾಶಕ್ಕೆ ತೆರಳಿರುವ 2ನೇ ಭಾರತೀಯ, ಐಎಸ್‌ಎಸ್ ಪ್ರವೇಶಿಸಿರುವ ಮೊದಲ ಭಾರತೀಯ ಎಂಬ ದಾಖಲೆಗಳನ್ನು ನಿರ್ಮಿಸಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು, ಅತಿ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದ ಭಾರತೀಯ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ.ಈ ಮೊದಲು 1984ರಲ್ಲಿ ಅಂತರಿಕ್ಷಕ್ಕೆ ಹೋಗಿದ್ದ ರಾಕೇಶ್ ಶರ್ಮಾ ಅವರು ಅಲ್ಲಿ 7 ದಿನ, 21 ಗಂಟೆ, 40 ಸೆಕೆಂಡ್‌ಗಳ ಕಾಲ ಇದ್ದರು. ಆದರೆ ಆ್ಯಕ್ಸಿಯೋಂ-4 ಮಿಷನ್ ಭಾಗವಾಗಿ ಐಎಸ್‌ಎಸ್‌ಗೆ ಹೋಗಿರುವ ಶುಕ್ಲಾ, 14 ದಿನ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಈಗಾಗಲೇ 8 ದಿನಗಳ ವಾಸ ಪೂರೈಸಿದ್ದಾರೆ.
ಜಿಮ್‌ನಲ್ಲಿ 175 ಕೇಜಿ ತೂಕದ ವ್ಯಕ್ತಿಗೆ ಹೃದಯಾಘಾತ: ಸಾವು
ನವದೆಹಲಿ: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ 175 ಕೇಜಿ ತೂಕವಿರುವ 35 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಪಂಕಜ್ (35) ಮೃತ ವ್ಯಕ್ತಿ ಕಳೆದ 5 ವರ್ಷಗಳಿಂದ ಫರೀದಾಬಾದ್‌ನ ಜಿಮ್‌ಗೆ ಕಳೆದ 5 ವರ್ಷಗಳಿಂದ ಬರುತ್ತಿದ್ದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ವರ್ಕೌಟ್ ಮಾಡಲೆಂದು ಬಂದಿದ್ದರು. ಈ ವೇಳೆ ಲಘು ವ್ಯಾಯಾಮ ಮಾಡುವಾಗ ಹೃದಯಾಘಾತ ಸಂಭವಿಸಿದೆ.
‘ಪಂಕಜ್ 175 ಕೇಜಿಯಷ್ಟು ಭಾರಿ ತೂಕವಿದ್ದ ಕಾರಣ ಅವರನ್ನು ಎತ್ತಿಕೊಮಡು ಆಸ್ಪತ್ರೆಗೆ ಕೊಂಡೊಯ್ಯಲು ಆಗಲಿಲ್ಲ. ಅಲ್ಲಿದ್ದವರು ನೀರು ಚಿಮುಕಿಸಿ ರಕ್ಷಿಸಲು ಯತ್ನಿಸಿ, ವೈದ್ಯರನ್ನು ಕರೆಸಿದ್ದರು. ಆದರೆ ಅಷ್ಟರೊಳಗೆ ಪಂಕಜ್ ಮೃತಪಟ್ಟಿದ್ದರು’ ಎಂದು ಗೊತ್ತಾಗಿದೆ. ಈ ಎಲ್ಲಾ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ.