ರಷ್ಯಾದ ತೈಲ ಖರೀದಿ ಸ್ಥಗಿತಕ್ಕೆ ಮೋದಿ ಒಪ್ಪಿಗೆ : ಟ್ರಂಪ್‌ ಬೊಗಳೆ

| N/A | Published : Oct 17 2025, 01:00 AM IST

ರಷ್ಯಾದ ತೈಲ ಖರೀದಿ ಸ್ಥಗಿತಕ್ಕೆ ಮೋದಿ ಒಪ್ಪಿಗೆ : ಟ್ರಂಪ್‌ ಬೊಗಳೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ- ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು 51 ಬಾರಿ ಸುಳ್ಳು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ‘ಇನ್ನು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನ್ನ ಮಿತ್ರ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ..

ವಾಷಿಂಗ್ಟನ್‌/ನವದೆಹಲಿ: ಭಾರತ- ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು 51 ಬಾರಿ ಸುಳ್ಳು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ‘ಇನ್ನು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನ್ನ ಮಿತ್ರ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು, ರಷ್ಯಾ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ’ ಎಂದು ಹೇಳಿದ್ದಾರೆ.

 ಆದರೆ, ಟ್ರಂಪ್ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕಸಿರುವ ಭಾರತ ಸರ್ಕಾರ ‘ನಿನ್ನೆ ಇಬ್ಬರು ನಾಯಕರ ನಡುವೆ ಯಾವುದೇ ಸಂಭಾಷಣೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ.ಗುರುವಾರ ಓವಲ್‌ ಕಚೇರಿಯಲ್ಲಿ ಮಾತನಾಡಿದ ಟ್ರಂಪ್‌, ‘ತೈಲ ಖರೀದಿಗೆ ಬದಲಾಗಿ ಭಾರತ ಪಾವತಿಸುವ ಹಣವನ್ನು ಪುಟಿನ್‌ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಬಳಸುತ್ತಾರೆ. ಅದು ನಮಗೆ ಇಷ್ಟವಿರಲಿಲ್ಲ. ಭಾರತ ತೈಲ ಖರೀದಿಯನ್ನು ಹಂತಹಂತವಾಗಿ ನಿಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದೆ’ ಎಂದಿದ್ದಾರೆ. ಜತೆಗೆ, ಚೀನಾವನ್ನೂ ಇದಕ್ಕೆ ಒಪ್ಪಿಸುವುದು ಬಾಕಿಯಿದೆ ಎಂದು ಹೇಳಿದ್ದಾರೆ.  

ಕಾಂಗ್ರೆಸ್‌ ಟೀಕೆ:

ರಷ್ಯಾದಿಂದ ಭಾರತದ ತೈಲ ಖರೀದಿಯ ಬಗ್ಗೆ ಟ್ರಂಪ್‌ರ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಮೋದಿ ಟ್ರಂಪ್‌ರಿಂದ ಹೆದರುತ್ತಾರೆ. ದೇಶದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನೂ ಅವರು ಅಮೆರಿಕಕ್ಕೇ ಕೊಟ್ಟಂತಿದೆ’ ಎಂದು ವ್ಯಂಗ್ಯವಾಡಿದೆ. ಜತೆಗೆ, ‘ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣ ಹಾಳಾಗಿದೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಅಥವಾ ವಿಪಕ್ಷಗಳ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದೆ.

ಈ ನಡುವೆ ‘ಭಾರತದ ಜತೆ ನಮ್ಮ ಇಂಧನ ವ್ಯಾಪಾರ ಹೀಗೇ ಮುಂದುವರೆಯಲಿದೆ ಎಂಬ ವಿಶ್ವಾಸ ನಮಗಿದೆ. ನಮ್ಮ ಮಿತ್ರರಾಷ್ಟ್ರಗಳೊಂದಿಗಿನ ಸಹಕಾರ ಹೀಗೇ ಇರಲಿದೆ. ನನ್ನ ಇಂಧನದ ದರ ಕೈಗೆಟುಕುವಂತಿರುವುದರಿಂದ ಅದಕ್ಕೆ ಭಾರೀ ಬೇಡಿಕೆಯಿದೆ’ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಹೇಳಿದ್ದಾರೆ. ಜತೆಗೆ, ‘ಭಾರತ ತನ್ನ ದಾರಿಯನ್ನು ತಾನೇ ಆಯ್ದುಕೊಳ್ಳುತ್ತದೆ ಹಾಗೂ ಅದನ್ನು ಬೇರೆಯವರು ಹೇಳಲಾಗದು ಎಂದು ಸ್ಪಷ್ಟಪಡಿಸಿದೆ’ ಎಂದರು.

ದೇಶದ ಹಿತಾಸಕ್ತಿ ಮುಖ್ಯ:

‘ಭಾರತವಿನ್ನು ರಷ್ಯಾದಿಂದ ತೈಲ ಖರೀದಿಸುವುದಿಲ್ಲ’ ಎಂಬ ಟ್ರಂಪ್‌ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ‘ಟ್ರಂಪ್‌ ಹಾಗೂ ಮೋದಿ ನಡುವೆ ನಿನ್ನೆ ಯಾವುದೇ ಫೋನ್‌ ಸಂಭಾಷಣೆ ನಡೆದಿಲ್ಲ. ಜತೆಗೆ, ತೈಲ ಬೆಲೆಯಲ್ಲಿ ಅನಿಶ್ಚಿತತೆ ಇರುವುದರಿಂದ ನಮಗೆ ಭಾರತೀಯರ ಹಿತಾಸಕ್ತಿ ಮುಖ್ಯ. ಅದಕ್ಕೆ ತಕ್ಕಂತೆ ವಿವಿಧ ದೇಶಗಳಿಂದ ತೈಲ ತರಿಸಿಕೊಳ್ಳುತ್ತದೆ’ ಎಂದಿದ್ದಾರೆ.

Read more Articles on