200% ತೆರಿಗೆ ಬೆದರಿಕೆ ಹಾಕಿದ್ದಕ್ಕೇ ಭಾರತ-ಪಾಕ್‌ ಯುದ್ಧ ನಿಲ್ತು: ಟ್ರಂಪ್‌

| N/A | Published : Oct 14 2025, 01:00 AM IST

ಸಾರಾಂಶ

  ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಭೀಕರ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 51ನೇ ಬಾರಿ ಪುನರುಚ್ಚರಿಸಿದ್ದಾರೆ. ಜೊತೆಗೆ ಯುದ್ಧ ನಿಲ್ಲಿಸಲು ನಾನು ಉಭಯ ದೇಶಗಳಿಗೆ ಶೇ.200ರಷ್ಟು ತೆರಿಗೆ ಹಾಕುವ ಬೆದರಿಕೆ ಹಾಕಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

 ವಾಷಿಂಗ್ಟನ್‌: ಭಾರತದ ಸ್ಪಷ್ಟ ನಿರಾಕರಣೆಯ ಹೊರತಾಗಿಯೂ ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಭೀಕರ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 51ನೇ ಬಾರಿ ಪುನರುಚ್ಚರಿಸಿದ್ದಾರೆ. ಜೊತೆಗೆ ಯುದ್ಧ ನಿಲ್ಲಿಸಲು ನಾನು ಉಭಯ ದೇಶಗಳಿಗೆ ಶೇ.200ರಷ್ಟು ತೆರಿಗೆ ಹಾಕುವ ಬೆದರಿಕೆ ಹಾಕಿದ್ದೆ ಎಂದು ಬಹಿರಂಗಪಡಿಸಿದ್ದಾರೆ. 

ಈ ಹಿಂದೆ ಹಲವು ಬಾರಿ ಎರಡೂ ದೇಶಗಳಿಗೆ ತೆರಿಗೆ ದಾಳಿಯ ಬೆದರಿಕೆ ಹಾಕಿದ್ದಾಗಿ ಟ್ರಂಪ್‌ ಹೇಳಿದ್ದರಾದರೂ ಇದೇ ಮೊದಲ ಬಾರಿ ಶೇ.200ರಷ್ಟು ತೆರಿಗೆ ಬೆದರಿಕೆಯ ವಿಷಯ ಬಯಲು ಮಾಡಿದ್ದಾರೆ. ಅಲ್ಲದೆ ಕಳೆದ 8 ತಿಂಗಳಲ್ಲಿ ನಾನು 8 ಯುದ್ಧ ಸ್ಥಗಿತ ಮಾಡಿದ್ದೇನೆ. ನನ್ನ ಮುಂದಿನ ಗುರಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಣ ಸಂಘರ್ಷ ನಿಲ್ಲಿಸುವುದಾಗಿದೆ ಎಂದು ಹೇಳಿದ್ದಾರೆ.

ಇಸ್ರೇಲ್‌-ಗಾಜಾ ಸಂಘರ್ಷ ಸ್ಥಗಿತದ ಭಾಗವಾಗಿ ಒತ್ತೆಯಾಳುಗಳ ಬಿಡುಗಡೆಗಾಗಿ ಇಸ್ರೇಲ್‌ಗೆ ತೆರಳಿರುವ ಟ್ರಂಪ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ತೆರಿಗೆ ಅಸ್ತ್ರವನ್ನಿಟ್ಟುಕೊಂಡೇ ನಾನು ಹಲವು ಯುದ್ಧ ನಿಲ್ಲಿಸಿದ್ದೇನೆ. ಉದಾಹರಣೆಗೆ ಅಣುಶಕ್ತ ರಾಷ್ಟ್ರಗಳಾದ ಭಾರತ - ಪಾಕಿಸ್ತಾನ ವಿಷಯಕ್ಕೆ ಬಂದರೆ, ಯುದ್ಧ ನಿಲ್ಲಿಸದಿದ್ದರೆ ಶೇ.100, ಶೇ.150, ಶೇ.200ರಷ್ಟು ಸುಂಕವನ್ನು ವಿಧಿಸುತ್ತೇನೆ ಎಂದಿದ್ದೆ. ಅದಾದ 24 ಗಂಟೆಯಲ್ಲಿ ಸಂಘರ್ಷ ನಿಂತಿತು. ತೆರಿಗೆ ವ್ಯವಸ್ಥೆ ಇರದಿದ್ದರೆ ಯುದ್ಧಶಮನ ಸಾಧ್ಯವೇ ಇರಲಿಲ್ಲ’ ಎಂದು ತಾವು ಮಾಡಿದ ಮಹತ್ಕಾರ್ಯವನ್ನು ಕೊಂಡಾಡಿಕೊಂಡಿದ್ದಾರೆ.

ಶಾಂತಿ ನೊಬೆಲ್‌ಗೆ ಟ್ರಂಪ್‌ ಹೆಸರು ಶಿಫಾರಸು

 ಜೆರುಸಲೇಂ: 2025ರ ನೊಬೆಲ್‌ ಶಾಂತಿ ಪ್ರಶಸ್ತಿ ಪಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕನಸು ಭಗ್ನವಾಗಿರುವ ಹೊತ್ತಿನಲ್ಲೇ, ಮುಂದಿನ ವರ್ಷ ಈ ಪ್ರಶಸ್ತಿಗೆ ಟ್ರಂಪ್‌ರನ್ನು ನಾಮನಿರ್ದೇಶನ ಮಾಡಲು ಇಸ್ರೇಲ್ ಸಂಸತ್ತು ಸೋಮವಾರ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಸಂಸತ್‌ ಸಭಾಪತಿ ಅಮೀರ್ ಒಹಾನಾ ಮಾತನಾಡಿ, ‘ಶಾಂತಿ ಪ್ರಶಸ್ತಿಗೆ ಟ್ರಂಪ್‌ ಬಿಟ್ಟರೆ ಬೇರೆ ಯಾರೂ ಅರ್ಹರಿಲ್ಲ’ ಎಂದು ಕೊಂಡಾಡಿದ್ದಾರೆ.

Read more Articles on