ಸಾರಾಂಶ
ಬೆಳಗಾವಿ : ಶೀಘ್ರವೇ 15 ಜನ ಕಾಂಗ್ರೆಸ್ ಶಾಸಕರು ದುಬೈಗೆ ಟೂರ್ ಹೋಗುವುದಾಗಿ ಹೇಳಿಕೆ ನೀಡಿದ್ದಕ್ಕಾಗಿ ಶಾಸಕ ಆಸೀಫ್ ಸೇಠ್ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಮಾತನಾಡಿದ್ದ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಸ್ನೇಹಿತರು, ಆಪ್ತ ಶಾಸಕರೆಲ್ಲರೂ ಸೇರಿ ದುಬೈ ಪ್ರವಾಸ ಕೈಗೊಳ್ಳಲಿದ್ದೇವೆ. ಆದರೆ, ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಬರುವುದಿಲ್ಲ. ವಿಮಾನ ಟಿಕೆಟ್ ಬುಕ್ ಮಾಡುತ್ತಿದ್ದೇವೆ, ಬುಕ್ ಆದ ಬಳಿಕ ಪ್ರವಾಸ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಿಕೆಶಿ ನಡುವಿನ ಬಣ ಬಡಿದಾಟದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಆಪ್ತ ಶಾಸಕ ಆಸೀಫ್ ಸೇಠ್ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಸಿಪಿಎಡ್ ಮೈದಾನದಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶದ ಸಿದ್ಧತೆ ಪರಿಶೀಲನೆ ವೇಳೆ ಆಸೀಫ್ ಸೇಠ್‌ರನ್ನು ಕರೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಡಿಕೆಶಿ, ಗನ್ ಮ್ಯಾನ್, ಪಿಎಗಳನ್ನು ವಾಹನದಿಂದ ಕೆಳಗಿಳಿಸಿ, ಸುಮಾರು 15 ನಿಮಿಷಗಳ ಕಾಲ ಕಾರಲ್ಲೇ ಚರ್ಚೆ ನಡೆಸಿದರು. ಈ ವೇಳೆ, ದುಬೈ ಟೂರ್ ಹೇಳಿಕೆ ನೀಡಿದ್ದಕ್ಕಾಗಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಡಿಕೆಶಿ ಜೊತೆಗಿನ ಮಾತುಕತೆ ಬಳಿಕ ಕಾರಿನಿಂದ ಹೊರ ಬಂದ ಆಸೀಫ್ ಸೇಠ್, ಇನ್ನೊಮ್ಮೆ ಈ ರೀತಿ ಮಾತನಾಡಲ್ಲ ಎಂದು ಹೇಳಿ ಮುನ್ನಡೆದರು.