ಸಾರಾಂಶ
ಹಲವು ದೇಶಗಳು ಭಾರೀ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದ್ದರೂ, ಕೇವಲ ಭಾರತವನ್ನು ಮಾತ್ರ ಅಮೆರಿಕ ಏಕೆ ಗುರಿಯಾಗಿಸಿಕೊಂಡಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚಿಕೊಂಡಿದ್ದಾರೆ.
ವಾಷಿಂಗ್ಟನ್: ರಷ್ಯಾದಿಂದ ಚೀನಾ ಸೇರಿದಂತೆ ಹಲವು ದೇಶಗಳು ಭಾರೀ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದ್ದರೂ, ಕೇವಲ ಭಾರತವನ್ನು ಮಾತ್ರ ಅಮೆರಿಕ ಏಕೆ ಗುರಿಯಾಗಿಸಿಕೊಂಡಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡುವುದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚಿಕೊಂಡಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರು, ‘ಚೀನಾ ಸೇರಿದಂತೆ ಹಲವು ದೇಶಗಳು ರಷ್ಯಾ ತೈಲ ಖರೀದಿ ಮಾಡುತ್ತಿದ್ದರೂ ಭಾರತಕ್ಕೆ ಮಾತ್ರ ಏಕೆ ಹೆಚ್ಚಿನ ತೆರಿಗೆ ಹಾಕಲಾಗಿದೆ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಟ್ರಂಪ್, ‘ಭಾರತದ ಮೇಲೆ ತೆರಿಗೆ ಹಾಕಿ ಇನ್ನೂ ಕೇವಲ 8 ಗಂಟೆಯಷ್ಟೇ ಆಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ. ಮುಂದಿನ ದಿನಗಳಲ್ಲಿ ನೀವು ಇಂಥ ಸಾಕಷ್ಟು ಬೆಳವಣಿಗೆ ಕಾಣಲಿದ್ದೀರಿ. 2ನೇ ಹಂತದ ತೆರಿಗೆಗಳು ಜಾರಿಯಾಗಲಿವೆ’ ಎಂದಷ್ಟೇ ಹೇಳಿದ್ದಾರೆ.
ಇನ್ನು, ‘ರಷ್ಯಾ- ಉಕ್ರೇನ್ ನಡುವೆ ಸಂಧಾನ ಏರ್ಪಟ್ಟರೆ ಭಾರತದ ಮೇಲಿನ ತೆರಿಗೆ ಕಡಿತ ಮಾಡಲಾಗುವುದೇ?’ ಎಂಬ ಪ್ರಶ್ನೆಗೆ, ‘ಅದನ್ನು ನಂತರ ನಿರ್ಧರಿಸಲಾಗುವುದು. ಇದೀಗ ಭಾರತ ಶೇ.50ರಷ್ಟಡು ತೆರಿಗೆ ಪಾವತಿಸಬೇಕಿದೆ’ ಎಂದಿದ್ದಾರೆ.