ಅಮೆರಿಕದಲ್ಲಿ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ : 2.0 ಯುಗ

| Published : Jan 20 2025, 01:33 AM IST / Updated: Jan 20 2025, 04:09 AM IST

ಸಾರಾಂಶ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌, ಸೋಮವಾರ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದಾಗಿ 5 ವರ್ಷ ಬಳಿಕ ಮತ್ತೆ ವಿಶ್ವದ ಅತಿ ಪ್ರಭಾವಿ ದೇಶದಲ್ಲಿ 2ನೇ ಬಾರಿ ಟ್ರಂಪ್‌ ಯುಗ ಆರಂಭವಾಗಲಿದೆ.

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌, ಸೋಮವಾರ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದಾಗಿ 5 ವರ್ಷ ಬಳಿಕ ಮತ್ತೆ ವಿಶ್ವದ ಅತಿ ಪ್ರಭಾವಿ ದೇಶದಲ್ಲಿ 2ನೇ ಬಾರಿ ಟ್ರಂಪ್‌ ಯುಗ ಆರಂಭವಾಗಲಿದೆ.

ಅಮೆರಿಕ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ। ಜಾನ್‌ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಇದಾದ ನಂತರ ಟ್ರಂಪ್‌, ತಮ್ಮ ಹೊಸ ಅವಧಿಯ ಮೊದಲ ಭಾಷಣವನ್ನು ಮಾಡುವ ನಿರೀಕ್ಷೆಯಿದೆ ಹಾಗೂ ಅದರಲ್ಲಿ ಮುಂದಿನ 4 ವರ್ಷಗಳವರೆಗಿನ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ. ನಂತರ ಮೊದಲ ಕಾರ್ಯಾದೇಶಗಳಿಗೆ ಸಹಿ ಹಾಕಲಿದ್ದಾರೆ. ಇದಲ್ಲದೆ, ಗಣ್ಯರ ಜತೆ ಔತಣದಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಟ್ರಂಪ್‌ ತಮ್ಮ ತಂಡದೊಂದಿಗೆ ಭಾನುವಾರ ವಾಷಿಂಗ್ಟನ್‌ಗೆ ಬಂದಿಳಿದಿದ್ದು, ಪ್ರಮಾಣ ವಚನಕ್ಕೆ ಪೂರ್ವಭಾವಿಯಾಗಿ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

40 ವರ್ಷ ಬಳಿಕ ಒಳಾಂಗಣದಲ್ಲಿ..:

ಈ ಮೊದಲು ಅಮೆರಿಕದ ಕ್ಯಾಪಿಟಲ್‌ ಕಟ್ಟಡದ ಎದುರು ಪ್ರಮಾಣವಚನ ಸ್ವೀಕಾರಕ್ಕೆ ಬೃಹತ್‌ ಸಮಾರಂಭ ಆಯೋಜಿಸಲಾಗಿತ್ತು. 2.2 ಲಕ್ಷ ಜನರಿಗೆ ಪಾಲ್ಗೊಳ್ಳಲು ಪಾಸ್‌ ನೀಡಲಾಗಿತ್ತು. ಆದರೆ ತಾಪಮಾನ ಸೊನ್ನೆಗಿಂತ ಕೆಳಗೆ ಇಳಿವ ಮುನ್ಸೂಚನೆ ಇರುವ ಕಾರಣ ಸಮಾರಂಭವನ್ನು ಕ್ಯಾಪಿಟಲ್‌ ರೊಟುಂಡಾ ಸಭಾಭವನದ ಒಳಗೆ ಆಯೋಜಿಸಲು ನಿರ್ಧರಿಸಲಾಗಿದೆ.

ಈ ರೀತಿ ಒಳಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವುದು 40 ವರ್ಷದಲ್ಲಿ ಇದೇ ಮೊದಲ ಬಾರಿ.

ಒಳಾಂಗಣದಲ್ಲಿ ಕೇವಲ 600 ಜನಕ್ಕೆ ಮಾತ್ರ ಸ್ಥಳಾವಕಾಶ ಇರಲಿದೆ. ಹೀಗಾಗಿ ಪಾಸ್‌ ಪಡೆದು ವಂಚಿತರಾದವರಿಗೆ ವಾಷಿಂಗ್ಟನ್‌ ಕ್ಯಾಪಿಟಲ್‌ ಒನ್‌ ಸ್ಪೋರ್ಟ್ಸ್‌ ಆರೇನಾದಲ್ಲಿ ಬೃಹತ್‌ ಪರದೆ ಹಾಕಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೇರಪ್ರಸಾರ ವೀಕ್ಷಿಸಲು ಅನುವು ಮಾಡಲಾಗಿದೆ. ಇಲ್ಲಿ 20 ಸಾವಿರ ಜನರಿಗೆ ಸ್ಥಳಾವಕಾಶ ಇದೆ.

ಸಮಾರಂಭಕ್ಕೆ ಗಣ್ಯರ ದಂಡು:

ಜಗತ್ತಿನ ಅತಿ ಶ್ರೀಮಂತನೂ ಆಗಿರುವ ಟ್ರಂಪ್‌ ಆಪ್ತ ಎಲಾನ್ ಮಸ್ಕ್, ಖ್ಯಾತ ಉದ್ಯಮಿ ಜೆಫ್ ಬೆಜೋಸ್ ಮತ್ತು ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌, ಚೀನಾ ಸಾಮಾಜಿಕ ಮಾಧ್ಯಮ ದೈತ್ಯ ಟಿಕ್‌ಟಾಕ್‌ ಮುಖ್ಯಸ್ಥ ಶೌ ಚೆವ್, ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಬರಾಕ್ ಒಬಾಮಾ, ಬಿಲ್‌ ಕ್ಲಿಂಟನ್‌ ಪತ್ನಿ ಹಿಲರಿ ಕ್ಲಿಂಟನ್‌, ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಭಾಗವಹಿಸಲಿದ್ದಾರೆ.

ವಿದೇಶಿ ಗಣ್ಯರಿಗೂ ಆಹ್ವಾನಿಸಲಾಗಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ- ಭಾಗವಹಿಸುವವರಲ್ಲಿ ಪ್ರಮುಖರು. ಭಾರತದಿಂದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪ್ರತಿನಿಧಿಯಾಗಿದ್ದಾರೆ.