ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಹೆಸರು ಫೈನಲ್‌?

| N/A | Published : Sep 05 2025, 09:35 AM IST

Jayadeva Hospital
ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಹೆಸರು ಫೈನಲ್‌?
Share this Article
  • FB
  • TW
  • Linkdin
  • Email

ಸಾರಾಂಶ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಅವರ ಹೆಸರು ಅಂತಿಮ

  ಬೆಂಗಳೂರು :  ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಅವರ ಹೆಸರು ಅಂತಿಮಗೊಳಿಸಲಾಗಿದ್ದು, ಆ ಕುರಿತು ಹೈಕೋರ್ಟ್‌ಗೆ ವರದಿ ಸಲ್ಲಿಸಿ ನಂತರ ಅಂತಿಮ ಆದೇಶ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ಪ್ರಭಾರ ನಿರ್ದೇಶಕ ಡಾ.ಕೆ.ಎಸ್‌.ರವೀಂದ್ರನಾಥ್‌ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ನಿರ್ದೇಶಕರ ನೇಮಕ ಮಾಡಬೇಕಿದೆ. ಅದಕ್ಕಾಗಿ ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಆಡಳಿತ ಮಂಡಳಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 11 ಹಿರಿಯ ವೈದ್ಯರ ಪೈಕಿ 10 ಮಂದಿಯನ್ನು ಸಂದರ್ಶನಕ್ಕೊಳಪಡಿಸಲಾಯಿತು.

ಡಾ.ದಿನೇಶ್‌, ಡಾ.ಎಂ.ದಿವ್ಯಾ ಪ್ರಕಾಶ್‌, ಡಾ.ಬಿ.ಗಿರೀಶ್‌, ಡಾ.ಎಸ್‌.ಜಯಪ್ರಕಾಶ್‌, ಡಾ.ವಿ.ಕುಮಾರಸ್ವಾಮಿ, ಡಾ.ಎ.ಸಿ.ನಾಗಮಣಿ, ಡಾ.ಸಿ.ಜಿ.ಪ್ರಭುಶಂಕರ್‌, ಡಾ.ಎಂ.ಪ್ರಸನ್ನ ಸಿಂಹ ಮತ್ತು ಡಾ.ವೇಣುಗೋಪಾಲ್‌ ರಾಮ್‌ರಾವ್‌ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಡಾ.ಸತೀಶ್‌ ಗೋವಿಂದಯ್ಯ ಗೈರಾಗಿದ್ದರು.

ಈ ಸಂದರ್ಶನದಲ್ಲಿ ನೂತನ ನಿರ್ದೇಶಕರ ಹುದ್ದೆಗೆ ಡಾ.ದಿನೇಶ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ, ನಿರ್ದೇಶಕ ಹುದ್ದೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವ ಕಾರಣದಿಂದಾಗಿ ಅಧಿಕೃತವಾಗಿ ಘೋಷಣೆ ಮಾಡಲಿಲ್ಲ. ಮಂಡಳಿ ಸಭೆಯ ನಿರ್ಣಯವನ್ನು ಹೈಕೋರ್ಟ್‌ಗೆ ಸರ್ಕಾರ ಸಲ್ಲಿಸಲಿದ್ದು, ಹೈಕೋರ್ಟ್‌ ನೀಡುವ ಆದೇಶದಂತೆ ನಿರ್ದೇಶಕ ಹುದ್ದೆ ಹೆಸರನ್ನು ಘೋಷಿಸಲು ನಿರ್ಧರಿಸಲಾಗಿದೆ.

ಹೈಕೋರ್ಟ್‌ನಲ್ಲಿ ಪ್ರಕರಣ:

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಈ ಹಿಂದೆ ನಿರ್ದೇಶಕರಾಗಿದ್ದ ಹಾಲಿ ಸಂಸದ ಡಾ. ಸಿ.ಎನ್‌.ಮಂಜುನಾಥ್‌ ಅವರಿಂದ ತೆರವಾದ ಸ್ಥಾನಕ್ಕೆ ಪ್ರಭಾರವಾಗಿ ಡಾ.ಕೆ.ಎಸ್‌. ರವೀಂದ್ರನಾಥ್‌ ಅವರನ್ನು ನೇಮಿಸಲಾಗಿತ್ತು. ಅದರ ಜತೆಗೆ ಕಾಯಂ ನಿರ್ದೇಶಕರ ನೇಮಕಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಅದರಂತೆ 11 ಮಂದಿ ಅರ್ಜಿ ಸಲ್ಲಿಸಿದ್ದರು. ನಂತರ ಸರ್ಕಾರ ಯಾವುದೆ ಪ್ರಕ್ರಿಯೆ ನಡೆಸಿರಲಿಲ್ಲ. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಹಿರಿಯ ವೈದ್ಯರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅದರ ಆಧಾರದಲ್ಲಿ ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಹೀಗಾಗಿ ಸರ್ಕಾರ ಸದ್ಯಕ್ಕೆ ನಿರ್ಧಾರವನ್ನು ಪ್ರಕಟಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

Read more Articles on