ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಹೆಸರಾಂತ ಅರ್ಥಶಾಸ್ತ್ರಜ್ಞ ಬಿಬೇಕ್‌ ದೇಬ್ರಾಯ್‌ ನಿಧನ

| Published : Nov 02 2024, 01:18 AM IST / Updated: Nov 02 2024, 04:56 AM IST

ಸಾರಾಂಶ

ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಅಧ್ಯಕ್ಷ ಬಿಬೇಕ್ ದೇಬ್ರಾಯ್‌ ಅವರು ಶುಕ್ರವಾರ ನಿಧನರಾದರು.

 ನವದೆಹಲಿ : ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಅಧ್ಯಕ್ಷ ಬಿಬೇಕ್ ದೇಬ್ರಾಯ್‌ ಅವರು ಶುಕ್ರವಾರ ನಿಧನರಾದರು.

ದೇಬ್ರಾಯ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಡಿಯಲ್ಲಿ 2017ರಿಂದ ಪ್ರಧಾನ ಮಂತ್ರಿ ಕಚೇರಿ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಅಧ್ಯಕ್ಷರಾಗಿದ್ದರು. ಪದ್ಮಶ್ರೀ ಪುರಸ್ಕೃತರಾಗಿದ್ದ ಅವರು ಅಂಕಣಕಾರರಾಗಿ ಅನೇಕ ಬರಹ ಬರೆದಿದ್ದರು. 69 ವರ್ಷದ ದೇಬ್ರಾಯ್‌ ಅನಾರೋಗ್ಯದ ಕಾರಣ ಏಮ್ಸ್‌ನಲ್ಲಿ ಬಿಪಿ ಹಾಗೂ ಸಕ್ಕರೆ ಕಾಯಿಲೆ ಬಿಗಡಾಯಿಸಿದ್ದರಿಂದ ದಿಲ್ಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೇಘಾಲಯ ಮೂಲದವರಾದ ದೇಬ್ರಾಯ್‌ 2015ರಿಂದ ಜೂನ್ 2019 ರವರೆಗೆ ನೀತಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮೋದಿ ಅಧಿಕಾರಕ್ಕೆ ಬಂದ ನಂತರ ಹಲವು ಕ್ಷೇತ್ರಗಳಲ್ಲಿ ನಡೆದ ಆರ್ಥಿಕ ಸುಧಾರಣೆಗಳಿಗೆ ಪ್ರಮುಖ ಕಾರಣಕರ್ತರಾಗಿದ್ದರು.ಅವರು ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಕೊಡುಗೆ ನೀಡುವುದರ ಜೊತೆಗೆ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ ಮತ್ತು ಬರೆದಿದ್ದರು. ಭಗವದ್ಗೀತೆಯ ಕುರಿತೂ ಅವರು ಪುಸ್ತಕ ಬರೆದಿದ್ದರು.

ಮೋದಿ ಶೋಕ:

ಪ್ರಧಾನಿ ನರೇಂದ್ರ ಮೋದಿ ದೇಬ್ರಾಯ್‌ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ‘ಅವರು ಅತ್ಯುತ್ತಮ ವಿದ್ವಾಂಸರು. ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮಿಕತೆಯಲ್ಲಿ ಚೆನ್ನಾಗಿ ಪಾರಂಗತರಾಗಿದ್ದರು. ತಮ್ಮ ಕೃತಿಗಳ ಮೂಲಕ, ಅವರು ಭಾರತದ ಬೌದ್ಧಿಕ ವಲಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಪ್ರಾಚೀನ ಗ್ರಂಥಗಳ ಅಧ್ಯಯನ ನಡೆಸಿ ಆ ಬಗ್ಗೆಯೂ ಬರೆದರು. ಅವುಗಳು ಯುವ ಜನರನ್ನು ಪ್ರೇರೇಪಿಸಿದವು’ ಎಂದಿದ್ದಾರೆ.