- ರಾಜ್ಯದ ಒಟ್ಟಾರೆ ಸಾಲ ₹13 ಲಕ್ಷ ಕೋಟಿಗೆ ಏರಿಕೆ
-5 ವರ್ಷದಲ್ಲಿ ರಾಜ್ಯದ ಸಾಲದ ಹೊರೆ 2 ಪಟ್ಟು ಏರಿಕೆ- ವಿಜಯ್ ಸರ್ಕಾರದಿಂದ ಶ್ವೇತಪತ್ರ ಬಿಡುಗಡೆಚೆನ್ನೈ: ತಮಿಳುನಾಡಿನ ಒಟ್ಟಾರೆ ಸಾಲ ಅಂದಾಜು 13.18 ಲಕ್ಷ ಕೋಟಿ ರು.ಗಳಿಗೆ ಏರಿದ್ದು, ರಾಜ್ಯದ ನೇರ ಸಾಲವು 10 ಲಕ್ಷ ಕೋಟಿ ರು.ಗಳ ಸಮೀಪದಲ್ಲಿದೆ. ರಾಜ್ಯದಲ್ಲಿ ಜನಿಸಿದ ಪ್ರತಿ ಮಗುವಿನ ತಲೆಯ ಮೇಲೂ 1.28 ಲಕ್ಷ ರು. ಸಾಲದ ಹೊರೆಯಿದೆ ಎಂದು ವಿಜಯ್ ನೇತೃತ್ವದ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಅಧಿಕಾರಕ್ಕೆ ಬಂದ ನಂತರ ವಿಜಯ್, ‘ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ’ ಎಂದಿದ್ದರು. ಇದಕ್ಕೆ ಡಿಎಂಕೆ ಕಿಡಿಕಾರಿತ್ತು. ಇದರ ಬೆನ್ನಲ್ಲೇ ಅವರು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ.ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಕಳೆದ 5 ವರ್ಷಗಳಲ್ಲಿ ರಾಜ್ಯದ ಸಾಲದ ಹೊರೆ 2 ಪಟ್ಟು ಏರಿಕೆಯಾಗಿದೆ. 5 ವರ್ಷಗಳ ಹಿಂದೆ ಸುಮಾರು 4.8 ಲಕ್ಷ ಕೋಟಿ ರು.ಗಳಷ್ಟಿದ್ದ ನೇರ ಸಾಲವು ಪ್ರಸ್ತುತ ಸುಮಾರು 10 ಲಕ್ಷ ಕೋಟಿ ರು.ಗಳಿಗೆ ತೀವ್ರವಾಗಿ ಏರಿದೆ. ಬಜೆಟ್ ಅಲ್ಲದ ಸಾಲಗಳು, ಗ್ಯಾರಂಟಿಗಳು ಮತ್ತು ಇತರ ಹೊಣೆಗಾರಿಕೆಗಳನ್ನು ಸೇರಿಸಿದಾಗ, ರಾಜ್ಯದ ನಿಜವಾದ ಆರ್ಥಿಕ ಹೊರೆ 13.18 ಲಕ್ಷ ಕೋಟಿ ರು.ಗಳೆಂದು ಅಂದಾಜಿಸಲಾಗಿದೆ ಎಂದು ಶ್ವೇತಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ಮಗುವಿನ ತಲೆ ಮೇಲೆ 1.28 ಲಕ್ಷ ರು. ಸಾಲ:ರಾಜ್ಯದಲ್ಲಿ ಜನಿಸಿದ ಪ್ರತಿ ಮಗುವಿನ ತಲೆಯ ಮೇಲೂ 1.28 ಲಕ್ಷ ರು.ಗಳ ಸಾಲದ ಹೊರೆಯಿದೆ. ಬಾಕಿ ಸಾಲದ ಹೊರೆ ಶೇ.28.2ರಲ್ಲೇ ಮುಂದುವರಿದಿದ್ದು, ಹಣಕಾಸಿನ ಕೊರತೆ 78,324 ಕೋಟಿ ರು. ಆಗಿದೆ. ಸರ್ಕಾರವು ಗಳಿಸುವ ಪ್ರತಿ ರು.ಗೆ 22.8 ಪೈಸೆಯನ್ನು ಬಡ್ಡಿ ಪಾವತಿಗೆ ಖರ್ಚು ಮಾಡಲಾಗುತ್ತಿದೆ. ಇದು ರಾಜ್ಯದ ಸಾಲ ಬಾಧ್ಯತೆಯ ಒತ್ತಡವನ್ನು ಪ್ರತಿಬಿಂಬಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.