ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿಗೆ ಹೆತ್ತವರ ಜವಾಬ್ದಾರಿ ಇರುತ್ತದೆ: ಕೋರ್ಟ್
ಲಖನೌ: ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಅಂಕಿತ್ ಸಾಹಾ ಎಂಬ ವ್ಯಕ್ತಿ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದು, ಮಾಸಿಕ 36,000 ಸಂಬಳ ಪಡೆಯುತ್ತಿದ್ದಳು. ಆದರೆ ಅಫಿಡವಿಟ್‌ನಲ್ಲಿ ಇದನ್ನು ಮರೆಮಾಚಿ, ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ಗೌತಮಬುದ್ಧ ನಗರದ ಕೌಟುಂಬಿಕ ಕೋರ್ಟ್, ಪತಿ ಜೀವನಾಂಶ ಕೊಡುವುದು ಕಡ್ಡಾಯ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾಹಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ತೀರ್ಪು ಪ್ರಕಟಿಸಿದ ಹೈಕೋರ್ಟ್, ‘ಮಹಿಳೆ ತಿಂಗಳಿಗೆ 36,000 ರು. ಗಳಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ. ಬೇರೆ ಯಾವುದೇ ಹೊಣೆಗಾರಿಕೆ ಇಲ್ಲದ ಹೆಂಡತಿಗೆ ಅಂತಹ ಮೊತ್ತವು ಅತ್ಯಲ್ಪ ಎಂದು ಹೇಳಲಾಗುವುದಿಲ್ಲ. ಆದರೆ ಪುರುಷನು ತನ್ನ ವಯಸ್ಸಾದ ಹೆತ್ತವರನ್ನು ಮತ್ತು ಇತರ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾನೆ. ಹಾಗಾಗಿ ಆತ ಜೀವನಾಂಶ ನೀಡುವ ಅಗತ್ಯವಿಲ್ಲ’ ಎಂದಿದೆ.ಜೊತೆಗೆ, ಕುಟುಂಬ ನ್ಯಾಯಾಲಯದ ತೀರ್ಪನ್ನು ಕಟುವಾಗಿ ಪ್ರಶ್ನಿಸಿ, ಪತಿ ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಮಾನ್ಯ ಮಾಡಿದೆ.