ಮೋದಿ, ರಾಹುಲ್‌, ಖರ್ಗೆ ವಿರುದ್ಧ ಚುನಾವಣಾ ಆಯೋಗ ನೋಟಿಸ್‌

| Published : Apr 26 2024, 12:45 AM IST / Updated: Apr 26 2024, 05:24 AM IST

Narendra Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗವು ಅವರ ಪಕ್ಷದ ಅಧ್ಯಕ್ಷರಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿದೆ.

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗವು ಅವರ ಪಕ್ಷದ ಅಧ್ಯಕ್ಷರಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿದೆ. ನೋಟಿಸ್‌ಗೆ ಏ.29ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಪ್ರಧಾನಿ ವಿರುದ್ಧದ ದೂರನ್ನು ಪರಿಗಣಿಸಿ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಸ್ಟಾರ್‌ ಪ್ರಚಾರಕರ ಭಾಷಣಕ್ಕೆ ಪಕ್ಷದ ಅಧ್ಯಕ್ಷರನ್ನೇ ಹೊಣೆ ಮಾಡಿದ ಮೊದಲ ಉದಾಹರಣೆ ಕೂಡಾ ಇದಾಗಿದೆ.

ರಾಜಸ್ಥಾನದ ಬನ್ಸ್ವಾರಾದಲ್ಲಿ ಮೋದಿ ಏ.21ರಂದು ಮಾಡಿದ ಭಾಷಣದಲ್ಲಿ ‘ಕಾಂಗ್ರೆಸ್‌ ಪಕ್ಷ ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಹೊರಟಿದೆ ಮತ್ತು ಆ ಪಕ್ಷ ಮಹಿಳೆಯರ ಮಂಗಳಸೂತ್ರವನ್ನು ಕೂಡ ಬಿಡುವುದಿಲ್ಲ’ ಎಂದು ಹೇಳಿದ್ದರು. ಅದರ ವಿರುದ್ಧ ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಕೆಲ ನಾಗರಿಕ ಸಂಸ್ಥೆಗಳು ದೂರು ನೀಡಿದ್ದವು. ಅದನ್ನು ಪರಿಗಣಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ಜಾರಿಗೊಳಿಸಿದೆ.

ಅದೇ ರೀತಿ, ಕೇರಳದ ಕೊಟ್ಟಾಯಂನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್‌ ಗಾಂಧಿ ಅವರು ‘ದೇಶದ ಪ್ರಧಾನಿ ನಮ್ಮ ಭಾಷೆ, ಇತಿಹಾಸ ಹಾಗೂ ಸಂಪ್ರದಾಯದ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇನ್ನು, ಖರ್ಗೆ ಅವರು ತಮ್ಮನ್ನು ದಲಿತ ಎಂಬ ಕಾರಣಕ್ಕೆ ರಾಮಮಂದಿರದ ಉದ್ಘಾಟನೆಗೆ ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದರು. ಇವುಗಳ ವಿರುದ್ಧ ಬಿಜೆಪಿ ನೀಡಿದ್ದ ದೂರನ್ನು ಪರಿಗಣಿಸಿ ಖರ್ಗೆ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಎರಡೂ ಪಕ್ಷಗಳ ಅಧ್ಯಕ್ಷರಿಗೆ ನೀಡಿರುವ ಈ ನೋಟಿಸ್‌ಗಳಲ್ಲಿ ‘ನಿಮ್ಮ ಪಕ್ಷದ ತಾರಾ ಪ್ರಚಾರಕರು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಮತ್ತು ಅವರ ಹೇಳಿಕೆಗಳಿಗೆ ವಿವರಣೆ ನೀಡಬೇಕು’ ಎಂದು ಸೂಚಿಸಲಾಗಿದೆ.