-66 ಮೀ. ಎತ್ತರದ, 17 ಅಂತಸ್ತಿನ ಐಷಾರಾಮಿ ನಿವಾಸ

-ಮುಟ್ಟುಗೋಲಾದ ಆಸ್ತಿ ಮೌಲ್ಯ ₹15,700 ಕೋಟಿಗೆ ಏರಿಕೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರ ಮುಂಬೈನಲ್ಲಿರುವ 17 ಅಂತಸ್ತಿನ 3,716 ಕೋಟಿ ರು. ಮೌಲ್ಯದ ಐಷಾರಾಮಿ ಮನೆ ‘ಅಬೋಡ್’ ಅನ್ನು ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಇ.ಡಿ.ಯಿಂದ ಮುಟ್ಟುಗೋಲಾದ ಅಂಬಾನಿ ಆಸ್ತಿಯ ಒಟ್ಟು ಮೌಲ್ಯ 15,700 ಕೋಟಿ ರು.ಗೆ ಏರಿಕೆಯಾಗಿದೆ.


2017ರಿಂದ 2019ರ ನಡುವೆ ಯೆಸ್ ಬ್ಯಾಂಕ್ ರಿಲಯನ್ಸ್ ಗ್ರೂಪ್ ಕಂಪನಿಗಳಿಗೆ ನೀಡಿದ ಸುಮಾರು 3,000 ಕೋಟಿ ರು. ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ನಡೆಸುತ್ತಿದೆ. ಯೆಸ್​ ಬ್ಯಾಂಕ್​ನಿಂದ ಅಕ್ರಮವಾಗಿ ಸಾಲ ಪಡೆದಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವೂ ಅನಿಲ್‌ ಅಂಬಾನಿ ಮೇಲಿದೆ.

ವಿಚಾರಣೆಗೆ ಹಾಜರು ನಿರೀಕ್ಷೆ: ಅಂಬಾನಿ 2ನೇ ಸುತ್ತಿನ ವಿಚಾರಣೆಗಾಗಿ ದೆಹಲಿಯಲ್ಲಿ ಇ.ಡಿ ಮುಂದೆ ಹಾಜರಾಗುವ ನಿರೀಕ್ಷೆಯಿದೆ. ಮೊದಲು 2025ರ ಆಗಸ್ಟ್‌ನಲ್ಲಿ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದ್ದರು.