ಭೂಪೇಶ್‌ ಭಗೇಲ್‌ ಛತ್ತೀಸ್‌ಗಢ ಸಿಎಂ ಆಗಿದ್ದಾಗ ನಡೆದಿದೆ ಎನ್ನಲಾದ 4000 ಕೋಟಿ ರು. ಮದ್ಯ ಹಗರಣ : ಇ.ಡಿ. ಬಿಸಿ

| N/A | Published : Mar 11 2025, 12:49 AM IST / Updated: Mar 11 2025, 04:15 AM IST

ಸಾರಾಂಶ

 ಭೂಪೇಶ್‌ ಭಗೇಲ್‌ ಛತ್ತೀಸ್‌ಗಢ ಸಿಎಂ ಆಗಿದ್ದಾಗ ನಡೆದಿದೆ ಎನ್ನಲಾದ 4000 ಕೋಟಿ ರು. ಮದ್ಯ ಹಗರಣ ಸಂಬಂಧ,  ಅವರ ಪುತ್ರ ಚೈತನ್ಯ ಬಘೇಲ್‌ ಹಾಗೂ ಅವರ ಆಪ್ತರಿಗೆ ಸೇರಿದ 15 ಕಡೆ  ಜಾರಿ ನಿರ್ದೇಶನಾಲಯ (ಇ.ಡಿ.) ಸೋಮವಾರ ದಾಳಿ ನಡೆಸಿದೆ. ಈ ವೇಳೆ ಬಘೇಲ್ ಮನೆಯಲ್ಲಿ 32 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.

ರಾಯ್ಪುರ: ಕಾಂಗ್ರೆಸ್‌ ನಾಯಕ ಭೂಪೇಶ್‌ ಭಗೇಲ್‌ ಛತ್ತೀಸ್‌ಗಢ ಸಿಎಂ ಆಗಿದ್ದಾಗ ನಡೆದಿದೆ ಎನ್ನಲಾದ 4000 ಕೋಟಿ ರು. ಮದ್ಯ ಹಗರಣ ಸಂಬಂಧ, ಬಘೇಲ್‌, ಅವರ ಪುತ್ರ ಚೈತನ್ಯ ಬಘೇಲ್‌ ಹಾಗೂ ಅವರ ಆಪ್ತರಿಗೆ ಸೇರಿದ 15 ಕಡೆ ಜಾರಿ ನಿರ್ದೇಶನಾಲಯ (ಇ.ಡಿ.) ಸೋಮವಾರ ದಾಳಿ ನಡೆಸಿದೆ. ಈ ವೇಳೆ ಬಘೇಲ್ ಮನೆಯಲ್ಲಿ 32 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.ಚೈತನ್ಯ ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಲಾಭ ಪಡೆದಿದ್ದಾರೆಂಬ ಆರೋಪದಡಿ, ದುರ್ಗ್‌ ಜಿಲ್ಲೆಯ ಭಿಲಾಯಿ ಎಂಬಲ್ಲಿ ಅವರಿಗೆ ಸಂಬಂಧಿಸಿದ ಆಸ್ತಿ ಮೇಲೆ ದಾಳಿ ನಡೆಸಲಾಗಿದೆ.

ಏನಿದು ಮದ್ಯ ಹಗರಣ?:

2019ರಿಂದ 2022ರ ಅವಧಿಯಲ್ಲಿ ಕಾಂಗ್ರೆಸ್‌ಗೆ ಹತ್ತಿರವಾಗಿದ್ದ ‘ಮದ್ಯ ಸಿಂಡಿಕೇಟ್’ (ಮದ್ಯ ಮಾಫಿಯಾ ತಂಡ) ಕಾರ್ಯಾಚರಣೆ ನಡೆಸುತ್ತಿತ್ತು. ಕಾಂಗ್ರೆಸ್‌ಗೆ ಬೇಕಾದ ಮದ್ಯ ಮಾರಾಟಗಾರರಿಂದ ಮಾತ್ರ ಸರ್ಕಾರ ಮದ್ಯ ಖರೀದಿಸಿ ಅಂಗಡಿಗಳಿಗೆ ಹಂಚುತ್ತಿತ್ತು. ಇದಕ್ಕೆ ಪ್ರತಿಯಾಗಿ ಮಾರಾಟಗಾರರಿಂದ ಸಿಂಡಿಕೇಟ್‌ಗೆ ಕಮಿಷನ್‌ ಹೋಗುತ್ತಿತ್ತು. ಇದರಲ್ಲಿ ಬಘೇಲ್‌ ಅವರಿಗೂ ಪಾಲು ಹೋಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 4000 ಕೋಟಿ ರು. ಹಾನಿ ಆಗಿದೆ ಎಂಬುದು ಇ.ಡಿ. ಶಂಕೆ.

ಇ.ಡಿ. ಟೀಂ ಮೇಲೆ ದಾಳಿ

ರಾಯ್‌ಪುರ: ದಾಳಿ ಮುಗಿಸಿ ಬಘೇಲ್‌ ಮನೆಯಿಂದ ಹೊರಟ ಇ.ಡಿ. ತಂಡದ ಮೇಲೆ, ಅವರ ಮನೆ ಹೊರಗಿದ್ದ ಕಾಂಗ್ರೆಸ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳ ಕಾರಿನ ಮೇಲೆ ದಾಳಿ ಮಾಡಿದರು ಹಾಗೂ ಕೆಲವು ಇ.ಡಿ. ಅಧಿಕಾರಿಗಳನ್ನು ಅವರು ಹೊಡೆದರು ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಅವರು ಬಘೇಲ್‌ ಮನೆ ಮುಂದೆ ಇ.ಡಿ. ವಿರುದ್ಧ ಪ್ರತಿಭಟಿಸಿದರು.