ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ : ಜಾರಿ ನಿರ್ದೇಶನಾಲಯ ದೊಣ್ಣೆಯಿಂದ ಸಿಎಂಪತ್ನಿ ಸದ್ಯಕ್ಕೆ ಪಾರು

| N/A | Published : Jan 28 2025, 01:45 AM IST / Updated: Jan 28 2025, 05:16 AM IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ : ಜಾರಿ ನಿರ್ದೇಶನಾಲಯ ದೊಣ್ಣೆಯಿಂದ ಸಿಎಂಪತ್ನಿ ಸದ್ಯಕ್ಕೆ ಪಾರು
Share this Article
  • FB
  • TW
  • Linkdin
  • Email

ಸಾರಾಂಶ

   ಮುಡಾ  ನಿವೇಶನ ಹಂಚಿಕೆ ಹಗರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದ್ದು, ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಹಾಜರಾಗುವಂತೆ ಇದೇ ಮೊದಲ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.

 ಬೆಂಗಳೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದ್ದು, ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಹಾಜರಾಗುವಂತೆ ಇದೇ ಮೊದಲ ಬಾರಿಗೆ ನೋಟಿಸ್‌ ಜಾರಿ ಮಾಡಿದೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್‌ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಈ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಧಾರವಾಡ ಹೈಕೋರ್ಟ್‌ ಪೀಠ ಫೆ.10 ರವರೆಗೆ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮುಖ್ಯಮಂತ್ರಿ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್‌ ದೊರಕಿದೆ. ಅರ್ಜಿಗಳ ಮುಂದಿನ ವಿಚಾರಣೆವರೆಗೆ ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗುವುದು ತಪ್ಪಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕೋಟ್ಯಂತರ ರು. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ನೊಟೀಸ್‌ ಜಾರಿಗೊಳಿಸಿ ಮಂಗಳವಾರ ಬೆಳಗ್ಗೆ 11ಕ್ಕೆ ಪ್ರಕರಣ ಸಂಬಂಧ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ವಿನಾಯಿತಿ ಕೇಳಿದ್ದ ಬೈರತಿ:

ಇದಕ್ಕೂ ಮುನ್ನ ಸಚಿವ ಬೈರತಿ ಸುರೇಶ್‌ಗೆ ನೋಟಿಸ್‌ ಜಾರಿಗೊಳಿಸಿ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಬೈರತಿ ಸುರೇಶ್‌ ಅವರು ತಮ್ಮ ಮಗನ ಮದುವೆ ಕಾರಣದಿಂದ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೋರಿದ್ದರು. ಆದರೂ ಇ.ಡಿ ಅಧಿಕಾರಿಗಳು ಎರಡನೇ ನೋಟಿಸ್‌ ನೀಡಲು ಸಿದ್ಧತೆ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇ.ಡಿ ನೋಟಿಸ್‌ಗೆ ತಕಾರರು ಕೋರಿ ಪಾರ್ವತಿ ಮತ್ತು ಬೈರತಿ ಸುರೇಶ್‌ ಪ್ರತ್ಯೇಕ ಅರ್ಜಿ ಸಲ್ಲಿಸಿ ಮಧ್ಯಂತರ ತಡೆಯಾಜ್ಞೆ ತರುವಲ್ಲಿ ಸಫಲವಾಗಿದ್ದಾರೆ.

ವಿಚಾರಣೆ ವೇಳೆ ಸಚಿವ ಬೈರತಿ ಸುರೇಶ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರನ್ನು ಆರೋಪಿಯಾಗಿ ಹೆಸರಿಸಿಲ್ಲ. ಆರೋಪಿಯಲ್ಲದಿದ್ದರೂ ಇ.ಡಿ. ಸಮನ್ಸ್‌ ಜಾರಿಗೊಳಿಸಿ ಸೋಮವಾರ ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅರ್ಜಿದಾರರ ಪುತ್ರನ ಮದುವೆ ಕಾರ್ಯಕ್ರಮ ಆರಂಭವಾಗಿದೆ. ಇಂಥ ಸಂದರ್ಭದಲ್ಲೂ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇನ್ನು ಇದೇ ಪ್ರಕರಣ ಸಂಬಂಧ ಮುಡಾ ಮಾಜಿ ಆಯುಕ್ತ ಡಾ.ನಟೇಶ್‌ಗೆ ಇ.ಡಿ ನೀಡಿದ್ದ ಸಮನ್ಸ್‌ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ನೋಟಿಸ್‌ಗೆ ತಡೆಯಾಜ್ಞೆ ನೀಡಬೇಕು. ಮುಂದಿನ ವಿಚಾರಣೆವರೆಗೂ ಇ.ಡಿಯಿಂದ ರಕ್ಷಣೆ ಒದಗಿಸಬೇಕು ಎಂದು ಕೋರಿದರು.

ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್‌ ಚೌಟ ಹಾಗೂ ವಿಕ್ರಂ ಹುಯಿಲಗೋಳ ಹಾಜರಾಗಿ, ಮುಡಾದ 14 ಸೈಟ್‌ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹಾಗಾಗಿ, ತನಿಖೆಗೆ ತಡೆ ನೀಡಬೇಕು ಎಂದರು.

ಯಾವುದೇ ಅಡ್ಡಪರಿಣಾಮ ಬೀರಲ್ಲ:

ಇ.ಡಿ. ಪರ ವಾದಿಸಿದ ಎಎಸ್‌ಜಿ ಅರವಿಂದ್‌ ಕಾಮತ್‌, ಡಾ.ನಟೇಶ್‌ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿರಲಿಲ್ಲ. ಇಂದು(ಸೋಮವಾರ) ಡಾ.ನಟೇಶ್‌ ಪರ ಆದೇಶ ಬಂದಿದೆ. ಆದರೆ, ಆದೇಶದ ಪೂರ್ಣಪ್ರತಿ ಇನ್ನೂ ಲಭ್ಯವಾಗಿಲ್ಲ. ಇನ್ನು ಇ.ಡಿ ಸಮನ್ಸ್‌ ಜಾರಿ ಮಾಡಿರುವುದರಿಂದ ಮುಡಾ ಪ್ರಕರಣವನ್ನು ಸಿಬಿಐಗೊಪ್ಪಿಸಲು ಕೋರಿದ ಅರ್ಜಿ ಕುರಿತ ಹೈಕೋರ್ಟ್‌ ವಿಚಾರಣಾ ಪ್ರಕ್ರಿಯೆ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಪ್ರಕರಣದ ಆರೋಪಿ ಸೇರಿ ಯಾವುದೇ ವ್ಯಕ್ತಿಯ ಸಾಕ್ಷ್ಯ ಅಥವಾ ಹೇಳಿಕೆ ದಾಖಲಿಸಿಕೊಳ್ಳಲು ನೋಟಿಸ್‌ ನೀಡುವ ಅಧಿಕಾರ ಇ.ಡಿ ಹೊಂದಿದೆ.

 ಹಾಗಾಗಿ, ಅರ್ಜಿದಾರರ ವಿರುದ್ಧದ ನೋಟಿಸ್‌ಗೆ ತಡೆ ನೀಡಬಾರದು ಎಂದು ಕೋರಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದೆ. ಇ.ಡಿ ನೋಟಿಸ್‌ ನೀಡಿರುವುದರಿಂದ ಹೈಕೋರ್ಟ್‌ ಪ್ರಕ್ರಿಯೆ ಮೇಲೆ ಅಡ್ಡಿ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಕರಣದಲ್ಲಿ ಇ.ಡಿ ಏಕೆ ಅಷ್ಟೊಂದು ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಅರವಿಂದ್‌ ಕಾಮತ್‌ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ 2ನೇ ಆರೋಪಿ. ಅವರ ಮೇಲೆ ಅಕ್ರಮವಾಗಿ ಸೈಟ್‌ಗಳನ್ನು ಪಡೆದ ಆರೋಪವಿದೆ. ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಅಧಿಸೂಚಿತ ಕೇಸ್‌ ಇದಾಗಿದೆ ಎಂದರು.

ಆ ವಾದ ಒಪ್ಪದ ನ್ಯಾಯಮೂರ್ತಿ, ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇ.ಡಿ ತನಿಖೆಯಿಂದ ಹೈಕೋರ್ಟ್‌ ಕಾಯ್ದಿರಿಸಿರುವ ಕೇಸ್‌ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ನಾನೇ ಆದೇಶ ನೀಡಿದ್ದೇನೆ. ಈಗ ಇ.ಡಿ ತನಿಖೆಗೆ ಅವಕಾಶ ನೀಡುವುದು ಹೇಗೆ ಎಂದು ಪ್ರಶ್ನಿಸಿದರು.ಅರವಿಂದ ಕಾಮತ್‌ ಉತ್ತರಿಸಿ, ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್‌ ಮುಂದಿರುವ ಕೇಸ್‌ಗೆ ಅಡ್ಡಿಯಾಗುವುದಿಲ್ಲ ಎಂದು ಸಮುಜಾಯಿಷಿ ನೀಡಿದರು.

ಆಗ ನ್ಯಾಯಮೂರ್ತಿಗಳು, ಒಂದು ವೇಳೆ ಅವರು ಹಾಜರಾಗದಿದ್ದರೆ ನೀವು ಅವರನ್ನು ಬಂಧಿಸಬಹುದು. ಆದ್ದರಿಂದ ಇ.ಡಿ ಪ್ರಕ್ರಿಯೆ ಮುಂದುವರಿಸಲು ಅನುಮತಿಸಲಾಗದು ಎಂದು ಹೇಳಿ ಮಧ್ಯಂತರ ಆದೇಶ ಮಾಡಿದರು.