ಇ.ಡಿ. ಎಲ್ಲೆ ಮೀರುತ್ತಿದೆ - ಇದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ಉಲ್ಲಂಘನೆ : ಸುಪ್ರೀಂ

| N/A | Published : May 23 2025, 06:32 AM IST

The Supreme Court of India (Photo/ANI)
ಇ.ಡಿ. ಎಲ್ಲೆ ಮೀರುತ್ತಿದೆ - ಇದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ಉಲ್ಲಂಘನೆ : ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯವನ್ನು (ಇ.ಡಿ.) ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಇ.ಡಿ.ಯು ಎಲ್ಲಾ ಮಿತಿಗಳನ್ನು ಮೀರುತ್ತಿದೆ, ಒಕ್ಕೂಟ ವ್ಯವಸ್ಥೆಯ ಆಡಳಿತದ ಪರಿಕಲ್ಪನೆಯ ಉಲ್ಲಂಘಿಸುತ್ತಿದೆ’ ಎಂದು ಕೋರ್ಟ್‌ ಅಸಮಾಧಾನ 

 ನವದೆಹಲಿ : ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಸಂಸ್ಥೆ ನಡೆಸಿದೆ ಎನ್ನಲಾದ ಮದ್ಯ ಲೈಸೆನ್ಸ್‌ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಗುರುವಾರ ಜಾರಿ ನಿರ್ದೇಶನಾಲಯವನ್ನು (ಇ.ಡಿ.) ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಇ.ಡಿ.ಯು ಎಲ್ಲಾ ಮಿತಿಗಳನ್ನು ಮೀರುತ್ತಿದೆ, ಒಕ್ಕೂಟ ವ್ಯವಸ್ಥೆಯ ಆಡಳಿತದ ಪರಿಕಲ್ಪನೆಯ ಉಲ್ಲಂಘಿಸುತ್ತಿದೆ’ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆಗೆ ತಡೆ ವಿಧಿಸಿದೆ.

‘ತಮಿಳನಾಡಲ್ಲಿ ಮದ್ಯದ ಪರವಾನಗಿ ನೀಡುವ ಸರ್ಕಾರಿ ಸ್ವಾಮ್ಯದ ತಮಿಳುನಾಡು ರಾಜ್ಯ ಮಾರ್ಕೆಟಿಂಗ್‌ ಕಾರ್ಪೊರೇಷನ್‌ (ಟಿಎಎಸ್‌ಎಂಎಸಿ- ಟಾಸ್ಮಾಕ್‌) ಮದ್ಯ ಲೈಸೆನ್ಸ್‌ನಲ್ಲಿ ಅಕ್ರಮ ಎಸಗಿದೆ. 1000 ಕೋಟಿ ರು. ಅಕ್ರಮ ಹಣ ವರ್ಗಾವಣೆ ನಡೆಸಿದೆ’ ಎಂದು ಇ.ಡಿ. ತನಿಖೆ ಆರಂಭಿಸಿತ್ತು, ಇದರ ವಿರುದ್ಧ ತಮಿಳುನಾಡು ಸರ್ಕಾರ ಹಾಗೂ ಟಾಸ್ಮಾಕ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು.

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಬಿ.ಆರ್‌.ಗವಾಯಿ ಮತ್ತು ನ್ಯಾ.ಆಗಸ್ಟಿನ್‌ ಜಾರ್ಜ್‌ ಮಸೀಹ್‌ ಅವರ ಪೀಠವು ತನ್ನೆದುರು ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜ್‌ ಅವರಿಗೆ, ‘ನಿಮ್ಮ ಇ.ಡಿ.ಯು ಎಲ್ಲಾ ಮಿತಿಗಳನ್ನು ದಾಟುತ್ತಿದೆ’ ಎಂದು ಹೇಳಿ ಟಾಸ್ಮಾಕ್‌ ವಿರುದ್ಧದ ತನಿಖೆಗೆ ತಡೆ ನೀಡಿತು. ಆಗ ಇ.ಡಿ. ಪರ ವಕೀಲರು, ‘ಇದು 1 ಸಾವಿರ ಕೋಟಿ ರು. ಹಗರಣ. ಈ ಪ್ರಕರಣದಲ್ಲಿ ಇ.ಡಿ. ಯಾವುದೇ ಮಿತಿ ದಾಟಿಲ್ಲ’ ಎಂದು ವಾದಿಸಿದರು. ಇದನ್ನು ಕೋರ್ಟು ತಳ್ಳಿಹಾಕಿತು.

ಬಳಿಕ ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್‌, ಅಮಿತ್‌ ನಂದ ತಿವಾರಿ ಅವರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೀಠವು, ‘2014ರಿಂದ ಈವರೆಗೆ ಮದ್ಯದಂಗಡಿ ಪರವಾನಗಿ ಹಂಚಿಕೆಗೆ ಸಂಬಂಧಿಸಿ ರಾಜ್ಯ ಸರ್ಕಾರವೇ 40ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಿಸಿದೆ. ಇದೀಗ ಇ.ಡಿ. ಏಕಾಏಕಿ ಈ ಪ್ರಕರಣದಲ್ಲಿ ಪ್ರವೇಶಿಸಿದ್ದು, ಟಾಸ್ಮಾಕ್‌ ಮೇಲೆ ದಾಳಿ ನಡೆಸಿದೆ. ರಾಜ್ಯಸ್ವಾಮ್ಯದ ಸಂಸ್ಥೆ ಮೇಲೆ ನೀವು ಹೇಗೆ ದಾಳಿ ನಡೆಸಲು ಸಾಧ್ಯ?’ ಎಂದು ಪೀಠ ಪ್ರಶ್ನಿಸಿತು.

ಬಿಜೆಪಿ ವಿರುದ್ಧ ಡಿಎಂಕೆ ಕಿಡಿ:

‘ಟಾಸ್ಮಾಕ್‌ ಪ್ರಕರಣದ ಇ.ಡಿ. ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿರುವುದು ಬಿಜೆಪಿಗೆ ತೀವ್ರ ಮುಖಭಂಗವುಂಟು ಮಾಡಿದೆ. ಇ.ಡಿ.ಯನ್ನು ಮುಂದಿಟ್ಟುಕೊಂಡು ಡಿಎಂಕೆ ಹೆಸರು ಕೆಡಿಸುವುದು ಮತ್ತು ಬಿಜೆಪಿಯೇತರ ರಾಜ್ಯಗಳಿಗೆ ಬ್ಲ್ಯಾಕ್‌ಮೇಲ್‌ ಮಾಡುವ ಬಿಜೆಪಿಯ ಪ್ರಯತ್ನಕ್ಕೆ ಭಾರೀ ಹಿನ್ನಡೆ ಆಗಿದೆ’ ಎಂದು ಡಿಎಂಕೆಯ ನಾಯಕ ಆರ್‌.ಎಸ್‌. ಭಾರತಿ ತಿಳಿಸಿದ್ದಾರೆ.

ಸುಪ್ರೀಂ ಚಾಟಿ ಏಕೆ?

ಟಾಸ್ಮಾಕ್‌ನಲ್ಲಿ ಸಾವಿರಾರು ಕೋಟಿ ರು.ಹಗರಣ ನಡೆದಿದೆ ಎಂದು ಈಗಾಗಲೇ ತಮಿಳುನಾಡು ಸರ್ಕಾರ ತನಿಖೆ ನಡೆಸುತ್ತಿದೆ

ಆದರೂ ಜಾರಿ ನಿರ್ದೇಶನಾಲಯ ಏಕಾಏಕಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಕೇಸು ದಾಖಲಿಸಿ ತನಿಖೆ ಆರಂಭಿಸಿತ್ತು

ಇದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ನೀವು ಎಲ್ಲೆ ಮೀರಿದ್ದೀರಿ. ಇದು ಒಕ್ಕೂಟ ವ್ಯವಸ್ಥೆ ಉಲ್ಲಂಘನೆ ಎಂದು ಕಿಡಿ

Read more Articles on