ಸಾರಾಂಶ
ನವದೆಹಲಿ: ನಿಷೇಧಿತ ಪಿಎಫ್‌ಐನ ರಾಜಕೀಯ ಅಂಗ ಎಸ್‌ಡಿಪಿಐಗೆ ಸೇರಿದ ತಮಿಳುನಾಡಿನ ಹಲವು ಸ್ಥಳಗಳ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಕೊಯಮತ್ತೂರಿನಲ್ಲಿ ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಕೊಯಮತ್ತೂರಿನ ಮೆಟ್ಟುಪಾಳ್ಯಂನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಹೀದುರ್ ರಹ್ಮಾನ್ ಜೈನುಲಬ್ದಿನ್ ಎಂಬಾತನ ಮನೆ ಮೇಲೆ ಇ.ಡಿ. ದಾಳಿ ನಡೆಸಿದೆ. ಬಳಿಕ ಪಿಎಂಎಲ್‌ಎ ಕಾಯ್ದೆ ಅಡಿ ರಹ್ಮಾನ್‌ನನ್ನು ವಶಕ್ಕೆ ಪಡೆದು ದೆಹಲಿಗೆ ಕರೆದೊಯ್ದಿದೆ. ಮಾ.3ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಎಸ್‌ಡಿಪಿಐನ ಅಧ್ಯಕ್ಷ ಎಂ.ಕೆ.ಫೈಜಿ ಬಂಧನವಾದ ಬಳಿಕ ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿದೆ.
ಹಮಾಸ್ ಬೆಂಬಲಿಸಿದ್ದ ಸೂರಿ ಗಡೀಪಾರಿಗೆ ಅಮೆರಿಕ ಕೋರ್ಟ್ ತಡೆ
ನ್ಯೂಯಾರ್ಕ್: ಹಮಾಸ್ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಅಮೆರಿಕದ ಭದ್ರತಾ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಭಾರತ ಮೂಲದ ವಿದ್ಯಾರ್ಥಿ ಬದರ್ ಖಾನ್ ಸೂರಿ ಗಡೀಪಾರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯ ತಡೆ ನೀಡಿದೆ. ವಾಷಿಂಗ್ಟನ್‌ನ ಜಾರ್ಜ್‌ಟೌನ್‌ನ ವಿಶ್ವವಿದ್ಯಾನಿಲಯದಲ್ಲಿ ಫೋಸ್ಟ್‌ಡಾಕ್ಟರಲ್ ಫೆಲೋ ಆಗಿದ್ದ ಸೂರಿ ಅಮೆರಿಕದಲ್ಲಿ ಹಮಾಸ್ ಸಿದ್ಧಾಂತಗಳನ್ನು ಪ್ರಚಾರ ಮಾಡುವುದರಲ್ಲಿ ಸಕ್ರಿಯನಾಗಿದ್ದ. ಸಾಮಾಜಿಕ ಮಾಧ್ಯಮದಲ್ಲಿ ಯಹೂದಿ ಸಿದ್ಧಾಂತದ ವಿರುದ್ಧ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಶಂಕಿತ ಭಯೋತ್ಪಾದಕನ ಜೊತೆಗೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದನು. ಆದರೆ ಮಾ.20 ರಂದು ಇಲ್ಲಿನ ಜಿಲ್ಲಾ ನ್ಯಾಯಾಧೀಶರಾದ ಪೆಟ್ರೀಷಿಯಾ ಟೋಲಿವರ್ ಗೈಲ್ಸ್ ಅವರು ಸೂರಿ ಗಡೀಪಾರಿಗೆ ತಡೆ ನೀಡಿದ್ದು, ‘ನ್ಯಾಯಾಲಯ ಆದೇಶ ನೀಡುವವರೆಗೂ ಅರ್ಜಿದಾರರನ್ನು ಅಮೆರಿಕದಿಂದ ಹೊರಕ್ಕೆ ಕಳುಹಿಸುವಂತಿಲ್ಲ’ ಎಂದಿದ್ದಾರೆ.
ಅಮೆರಿಕದಿಂದ ಇನ್ನೂ 295 ಭಾರತೀಯರ ಗಡೀಪಾರು ಸಾಧ್ಯತೆ: ಕೇಂದ್ರ ಸರ್ಕಾರ
ನವದೆಹಲಿ: ಈಗಾಗಲೇ ಅಮೆರಿಕದಿಂದ 388 ಭಾರತೀಯರನ್ನು ಗಡೀಪಾರು ಮಾಡಲಾಗಿದ್ದು, ಇನ್ನೂ 295 ಜನ ತಾಯ್ನಾಡಿಗೆ ಮರಳುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹಂಚಿಕೊಂಡಿದೆ. ‘295 ಮಂದಿ ಭಾರತೀಯರು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳ ವಶದಲ್ಲಿದ್ದು, ಅವರನ್ನು ಗಡೀಪಾರು ಮಾಡಲು ಆದೇಶಿಸಲಾಗಿದೆ. ಅವರೆಲ್ಲರ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಭಾರತದ ಪಾಸ್‌ಪೋರ್ಟ್ ಹೊಂದಿರುವ ಒಟ್ಟು ಎಷ್ಟು ಮಂದಿ ಅಮೆರಿಕದಲ್ಲಿದ್ದಾರೆ ಎಂಬ ಬಗ್ಗೆ ಅಲ್ಲಿನ ಆಡಳಿತ ಮಾಹಿತಿ ನೀಡಿಲ್ಲ’ ಎಂದು ಸರ್ಕಾರ ತಿಳಿಸಿದೆ. ಇದೇ ವೇಳೆ ‘ಫೆ.5ರಂದು ಬಂದಿಳಿದ ವಿಮಾನದಲ್ಲಿದ್ದವರನ್ನು, ವಿಶೇಷವಾಗಿ ಮಹಿಳೆಯರನ್ನು ಸರಪಳಿಯಲ್ಲಿ ಬಿಗಿದ ಬಗ್ಗೆ ಸಚಿವಾಲಯವು ಅಮೆರಿಕದ ಅಧಿಕಾರಿಗಳೆದುರು ಕಳವಳ ವ್ಯಕ್ತಪಡಿಸಿದೆ’ ಎಂದು ತಿಳಿಸಿದೆ.
ದೇಶದ ಎಲ್ಲ ರಾಜ್ಯಗಳ ರಾಜಧಾನೀಲಿ ತಿರುಪತಿ ದೇಗುಲ: ಸಿಎಂ ನಾಯ್ಡು
ತಿರುಮಲ: ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯ ನಿರ್ಮಿಸಲಾಗುವುದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ‘ದೇಶಾದ್ಯಂತ ಮತ್ತು ವಿದೇಶಗಳಲ್ಲಿಯೂ ವೆಂಕಟೇಶ್ವರ ಸ್ವಾಮಿ ದೇಗುಲ ನಿರ್ಮಾಣಕ್ಕೆ ಭಕ್ತರು ಬೇಡಿಕೆಯಿಡುತ್ತಿದ್ದಾರೆ. ಎಲ್ಲಾ ರಾಜ್ಯಗಳ ರಾಜಧಾನಿಯಲ್ಲೂ ವೆಂಕಟೇಶ್ವರ ದೇಗುಲ ನಿರ್ಮಾಣ ಮಾಡುತ್ತೇವೆ’ ಎಂದರು. ಇದೇ ವೇಳೆ, ‘ತಿರುಪತಿ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಸದ್ಯ ಅಲ್ಲಿ ಇತರ ಸಮುದಾಯದವರು ಕೆಲಸ ಮಾಡುತ್ತಿದ್ದರೆ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದರು.ಸೆವೆನ್ ಹಿಲ್ಸ್ ಪ್ರದೇಶದ ಬಳಿಯ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅವರು, ‘ಇಲ್ಲಿನ 35.32 ಎಕರೆ ಜಾಗದಲ್ಲಿ ಮುಮ್ತಾಜ್ ಹೋಟೆಲ್ ನಿರ್ಮಾಣಕ್ಕೆ ನೀಡಿದ್ದ ಮಂಜೂರಾತಿಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಸೆವೆನ್ಸ್ ಹಿಲ್ಸ್ ಬಳಿ ವ್ಯಾಪಾರೀಕರಣ ಬೇಡ’ ಎಂದು ಪ್ರತಿಪಾದಿಸಿದರು.
ಯೂಟ್ಯೂಬ್ ನೋಡಿ ಸ್ವತಃ ಆಪರೇಷನ್‌ಗೆ ಯತ್ನಿಸಿ ಆರೋಗ್ಯ ಸ್ಥಿತಿ ಗಂಭೀರ
ಆಗ್ರಾ: ಇಂಟರ್ನೆಟ್ ಶುರುವಾದ ಬಳಿಕ ಜನರು ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಉತ್ತರ ಪ್ರದೇಶದ ರಾಜ್‌ಬಾಬು ಎಂಬಾತ ಅಪೆಂಡಿಕ್ಸ್ ಸಮಸ್ಯೆ ಪರಿಹಾರಕ್ಕಾಗಿ ವೈದ್ಯರ ಬಳಿ ತೆರಳುವುದು ಬಿಟ್ಟು ಯೂಟ್ಯೂಬ್ ನೋಡಿ ಸ್ವತಃ ಆಪರೇಷನ್ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಅದಕ್ಕಾಗಿ ಅನಸ್ತೇಷಿಯಾ ಇಂಜೆಕ್ಷನ್ ಸಹ ಚುಚ್ಚಿಕೊಂಡಿದ್ದಾರೆ. ಬಳಿಕ ವೈದ್ಯಕೀಯ ಚಾಕು ಬಳಸಿ 7 ಇಂಚು ಗುಂಡಿ ತೋಡಿಕೊಂಡಿದ್ದಾನೆ. ಅಂದುಕೊಂಡಂತೆ ಆಗದ ಕಾರಣ ನೋವು ಜೋರಾಗಿ, ಮನೆಯವರ ಸಹಾಯ ಬಯಸಿದ್ದಾರೆ. ಬಳಿಕ ಮಥುರಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಆಗದೆ, ಆಗ್ರಾದ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ, ಮಂಗಳವಾರ ಬ್ಯಾಂಕ್ ಮುಷ್ಕರವಿಲ್ಲ
ನವದೆಹಲಿ: ವಾರದಲ್ಲಿ 5 ದಿನಗಳ ಕೆಲಸದ ಅವಧಿ ಮತ್ತು ಎಲ್ಲಾ ಕೇಡರ್‌ಗಳಲ್ಲಿ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಬ್ಯಾಂಕ್ ಯೂನಿಯನ್‌ಗಳು ಮಾ.24,25 ರಂದು ನೀಡಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆ
ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.9 ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟವಾದ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ(ಯುಎಫ್‌ಬಿಯು) ಮುಷ್ಕರಕ್ಕೆ ಕರೆ ನೀಡಿತ್ತು. ನೇಮಕಾತಿ, ಪಿಎಲ್‌ಐ ಮತ್ತು 5 ದಿನಗಳ ಕೆಲಸ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಯುಎಫ್‌ಬಿಯು ಆಗ್ರಹಿಸಿತ್ತು. ಇದಕ್ಕೆ ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಮುಷ್ಕರ ಮುಂದೂಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಹೇಳಿದೆ.
9.2 ಕಿ.ಮೀ. ಉದ್ದದ ಸುರಂಗ ರೈಲು ಮಾರ್ಗ ಯೋಜನೆಗೆ ಕೇರಳ ಅಸ್ತು
ಕೊಚ್ಚಿ: ವಿಜಿಂಜಮ್ ಅಂತಾರಾಷ್ಟ್ರೀಯ ಬಂದರು ಯೋಜನೆಯ ಭಾಗವಾಗಿ 9.2 ಕಿ.ಮೀ. ಉದ್ದದ ಸುರಂಗ ರೈಲು ಮಾರ್ಗ ಯೋಜನೆಗೆ ಕೇರಳ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
1,482 ಕೋಟಿ ವೆಚ್ಚದ ಈ ಯೋಜನೆಯಡಿ ಒಟ್ಟು 10.7 ಕಿ.ಮೀ, ಉದ್ದದ ರೈಲು ಮಾರ್ಗ ನಿರ್ಮಿಸಲಾಗುತ್ತಿದ್ದು, ಇದರಲ್ಲಿ 9.2 ಕಿ.ಮೀ. ಸುರಂಗ ಮಾರ್ಗವಾಗಿದೆ.ಕೊಂಕಣ ರೈಲ್ವೆಯು ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆ ತಿರುವನಂತಪುರಂ-ಕನ್ಯಾಕುಮಾರಿ ರೈಲ್ವೆ ಮಾರ್ಗವನ್ನು ಸಂಪರ್ಕಿಸುವ ಬಲರಾಮಪುರಂನಿಂದ ವಿಜಿಂಜಮ್ ಅಂತಾರಾಷ್ಟ್ರೀಯ ಬಂದರಿಗೆ ಸರಕು ಕಂಟೈನರ್‌ಗಳನ್ನು ಸಾಗಿಸಲು ನೆರವಾಗುತ್ತದೆ. 2028ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ರೈಲ್ವೆ ಯೋಜನೆ ಜನನಿಬಿಡ ಪ್ರದೇಶದಲ್ಲೇ ಹಾದುಹೋಗುವುದರಿಂದ ಭಾರೀ ಪ್ರಮಾಣದಲ್ಲಿ ಭೂಸ್ವಾಧೀನದ ಅಗತ್ಯವಿತ್ತು. ಹೀಗಾಗಿ ವೆಚ್ಚ ಕಡಿತದ ಉದ್ದೇಶದಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಮೊರೆಹೋಗಾಗಿದೆ. ಅದರಂತೆ 15ರಿಂದ 30 ಮೀಟರ್ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ವಾಗಲಿದೆ.