ಆಪ್‌ ಸಂಸದ ಸಂಜೀವ್ ಅರೋರಾ 16-17 ಸ್ಥಳಗಳ ಮೇಲೆ ಇ.ಡಿ. ದಾಳಿ: ಅಕ್ರಮ ಹಣ ವರ್ಗಾವಣೆ ಶಂಕೆ

| Published : Oct 08 2024, 01:03 AM IST / Updated: Oct 08 2024, 04:49 AM IST

ಸಾರಾಂಶ

ಪಂಜಾಬ್‌ನ ಆಪ್‌ ಸಂಸದ ಸಂಜೀವ್ ಅರೋರಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಪ್‌ ನಾಯಕರು ಇದನ್ನು ಪಕ್ಷ ಒಡೆಯುವ ಸಂಚು ಎಂದು ಕರೆದಿದ್ದಾರೆ.

  ನವದೆಹಲಿ : ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಹಾರ ಮುಂದುವರಿಸಿದ್ದು, ಸೋಮವಾರ ಪಂಜಾಬ್‌ನ ಆಪ್‌ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಅವರ ಜಲಂಧರ್‌, ಲುಧಿಯಾನಾ, ಗುರುಗ್ರಾಮ ಹಾಗೂ ದಿಲ್ಲಿ ನಿವಾಸಗಳು ಸೇರಿ 16-17 ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ದಾಳಿ ನಡೆಸಲಾಗಿದೆ.

ದಾಳಿ ಏಕೆ ನಡೆದಿದೆ ನನಗೆ ಗೊತ್ತಿಲ್ಲ ಎಂದು ಅರೋರಾ ಹೇಳಿದ್ದಾರಾದರೂ, ಅವರು ಕೈಗಾರಿಕಾ ಪ್ಲಾಟ್‌ ಒಂದನ್ನು ಅಕ್ರಮವಾಗಿ ತಮ್ಮ ಕಂಪನಿ ಹೆಸರಿನಲ್ಲಿ ವರ್ಗಾಯಿಸಿದ್ದಾರೆ ಎಂಬ ಆರೋಪದ ಕಾರಣ ದಾಳಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ ಆಪ್‌ ನೇತಾರರಾದ ಕೇಜ್ರಿವಾಲ್‌ ಹಾಗೂ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ‘ದೇವರು ಆಪ್‌ ಜತೆಗೆ ಇದ್ದಾನೆ. ನಾವು ಹೆದರಬೇಕಿಲ್ಲ. ಇದು ಪಕ್ಷ ಒಡೆಯಲು ನಡೆಸಿದ ಸಂಚು’ ಎಂದಿದ್ದಾರೆ.