ಚುನಾವಣಾ ಬಾಂಡ್‌ ವಿಶ್ವದ ದೊಡ್ಡ ಹಗರಣ: ರಾಹುಲ್

| Published : Apr 07 2024, 01:54 AM IST / Updated: Apr 07 2024, 05:15 AM IST

Rahul Gandhi

ಸಾರಾಂಶ

ಇತ್ತೀಚೆಗೆ ಸುಪ್ರೀಂಕೋರ್ಟ್‌ ಆದೇಶದ ಬಳಿಕ ರದ್ದಾದ ಚುನಾವಣಾ ಬಾಂಡ್‌ ಯೋಜನೆ ವಿಶ್ವದ ದೊಡ್ಡ ಹಗರಣ ಎಂದು ಕಾಂಗ್ರೆಸ್‌ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಹೈದರಾಬಾದ್‌: ಇತ್ತೀಚೆಗೆ ಸುಪ್ರೀಂಕೋರ್ಟ್‌ ಆದೇಶದ ಬಳಿಕ ರದ್ದಾದ ಚುನಾವಣಾ ಬಾಂಡ್‌ ಯೋಜನೆ ವಿಶ್ವದ ದೊಡ್ಡ ಹಗರಣ ಎಂದು ಕಾಂಗ್ರೆಸ್‌ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ ಚುನಾವಣಾ ಆಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರನ್ನೇ ನೇಮಕ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ

ಹೈದರಾಬಾದ್‌ನಲ್ಲಿ ಚುನಾವಣಾ ಭಾಷಣದಲ್ಲಿ ಮಾತನಾಡಿದ ರಾಹುಲ್‌,‘ದೇಶದಲ್ಲಿ ಪ್ರತಿ ದಿನ 30 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಒಂದು ರೂಪಾಯಿ ಸಾಲವನ್ನು ಮನ್ನಾ ಮಾಡದೇ ಕೇವಲ ಶ್ರೀಮಂತರ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ ಎಂದು ದೂಷಿಸಿದರು. ಜೊತೆಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದಲ್ಲಿ ಕೋಟ್ಯಂತರ ಜನರು ಬಡವರಾಗಿದ್ದಾರೆ’ ಎಂದರು.

ಪಂಚ್‌ ನ್ಯಾಯ್‌ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಿ, ಕಿಸಾನ್‌ ನ್ಯಾಯ್‌ ಅಡಿಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗುವುದು. ಹೀಗಾಗಿ ನಮ್ಮ ಪಕ್ಷದ ಪ್ರಣಾಳಿಕೆ ಜನರ ಆಶಯವನ್ನು ಪೂರ್ಣವಾಗಿ ಹೊಂದಿದೆ ಎಂದು ರಾಹುಲ್‌ ಭರವಸೆ ನೀಡಿದರು.

ಕಾಂಗ್ರೆಸ್‌ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಈಗಾಗಲೇ 30,000 ಹುದ್ದೆಗಳನ್ನು ಭರ್ತಿ ಮಾಡಿದೆ. ಮುಂದೆ ಇನ್ನು 50,000 ಹುದ್ದೆಗಳ ನೇಮಕ ಮಾಡಲಾಗುವುದು ಎಂದು ಹೇಳಿದರು.