ಸಾರಾಂಶ
ಚೀನಾವು ವಿಶ್ವದ ಅತೀದೊಡ್ಡ ಬಾಹುಬಲಿ ಡ್ರೋನ್ ಅನ್ನು ಇದೀಗ ತನ್ನ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದೆ.
ನವದೆಹಲಿ: ಭವಿಷ್ಯದ ಯುದ್ಧಗಳಲ್ಲಿ ಡ್ರೋನ್‌ಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂಬುದು ಈಗಾಗಲೇ ಉಕ್ರೇನ್-ರಷ್ಯಾ ಯುದ್ಧ, ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಸ್ಪಷ್ಟವಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಚೀನಾವು ವಿಶ್ವದ ಅತೀದೊಡ್ಡ ಬಾಹುಬಲಿ ಡ್ರೋನ್ ಅನ್ನು ಇದೀಗ ತನ್ನ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದೆ.
ಈ ಮಹಾ ಡ್ರೋನ್ ಒಂದೇ ಸಲಕ್ಕೆ 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್‌ಗಳ ಸಮೂಹವನ್ನೇ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಜೂನ್ ಅಂತ್ಯದಲ್ಲಿ ಈ ಬಾಹುಬಲಿ ಡ್ರೋನ್ ತನ್ನ ಚೀನಾ ಸೇನೆಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಈ ಮಾನವ ರಹಿತ ವಿಮಾನ(ಯುಎವಿ)ವು ಕಣ್ಗಾವಲು, ತುರ್ತು ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆ ಸೇರಿ ಇತರೆ ಉದ್ದೇಶಗಳಿಗಾಗಿ ಮತ್ತು ಡ್ರೋನ್‌ಗಳ ಸಮೂಹವನ್ನೇ ನಿಯೋಜಿಸಲು ನೆರವು ನೀಡಲಿದೆ.
ವಿಶೇಷತೆ ಏನು?:
ಈ ಜಿಯು ಟಿಯಾನ್ ಹೆಸರಿನ ಡ್ರೋನ್ 10000 ತೂಕ ಹೊಂದಿರುವ ಮಾನವರಹಿತ ವಿಮಾನವಾಗಿದೆ. ಇದು ಸುಮಾರು 6 000 ಕೆಜಿ ಸಾಮರ್ಥ್ಯದ 100 ಸಣ್ಣ ಡ್ರೋನ್‌ಗಳನ್ನು ಸುಮಾರು 7000 ಕಿ.ಮೀ. ವರೆಗೆ ಹೊತ್ತೊಯ್ಯಬಲ್ಲುದಾಗಿದೆ. ವಿಶೇಷವೆಂದರೆ ಈ ಡ್ರೋನ್ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಈ ಮೂಲಕ ಮಧ್ಯಮದೂರ ವ್ಯಾಪ್ತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಗುರಿಗೆ ಸಿಲುಕದೆ ಸಾಗಲಿದೆ. ಈ ಯುಎವಿಯನ್ನು ಕಳೆದ ನವೆಂಬರ್‌ನಲ್ಲಿ ಚೀನಾದ ಜುಹಾಯಿಯಲ್ಲಿ ನಡೆದ ಚೀನಾದ ಅತಿದೊಡ್ಡ ಅಂತಾರಾಷ್ಟ್ರೀಯ ಏರ್‌ಶೋದಲ್ಲಿ ಪ್ರದರ್ಶಿಸಲಾಗಿತ್ತು. ಇದು ಆತ್ಮಾಹುತಿ ಡ್ರೋನ್‌ಗಳ ಸಮೂಹವನ್ನೇ ಶತ್ರುಪಡೆಗಳ ಮೇಲೆ ಛೂಬಿಡುವ ತಾಕತ್ತು ಹೊಂದಿದೆ. ಡ್ರೋನ್‌ಗಳ ಸಾಗಾಟಕ್ಕಷ್ಟೇ ಅಲ್ಲದೆ, ಕ್ಷಿಪಣಿಗಳನ್ನೂ ಹಾರಿಬಿಡಲೂ ಈ ಯುಎವಿ ಬಳಸಬಹುದು ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಯುದ್ಧದ ವೇಳೆ ನಿರ್ದಿಷ್ಟವಾಗಿ ಒಂದು ಡ್ರೋನ್ ಮೂಲಕ ದಾಳಿ ನಡೆಸುವುದಕ್ಕಿಂತ ಡ್ರೋನ್‌ಗಳ ಸಮೂಹವನ್ನೇ ಹಾರಿಬಿಟ್ಟು ಕೃತಕ ಬುದ್ಧಿಮತ್ತೆ ಬಳಸಿಕೊಂಡು ದಾಳಿಯ ತಂತ್ರಗಾರಿಕೆ ರೂಪಿಸುವುದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಅಲ್ಲದೆ, ಡ್ರೋನ್‌ಗಳ ಸಮೂಹಗಳ ನಿರ್ಮಾಣ, ನಿರ್ವಹಣೆ ವೆಚ್ಚವು ಇವುಗಳನ್ನು ಹೊಡೆದುರುಳಿಸುವ ರಕ್ಷಣಾ ವ್ಯವಸ್ಥೆಯ ನಿರ್ವಹಣೆಗಿಂತ ಅಗ್ಗ. ಹೀಗಾಗಿ ಈ ಡ್ರೋನ್‌ಗಳ ಸಮೂಹವನ್ನು ಹಾರಿಬಿಟ್ಟು ಶತ್ರುರಾಷ್ಟ್ರಗಳಿಗೆ ಹೆಚ್ಚಿನ ನಷ್ಟ ಉಂಟಮಾಡಬಹುದಾಗಿದೆ.