ಸಾರಾಂಶ
ಕರ್ನಲ್ ಸೋಫಿಯಾ ಖುರೇಷಿಯನ್ನು ‘ಪಾಕಿಸ್ತಾನಿ ಉಗ್ರರ ಸಹೋದರಿ’ ಎಂದು ಕರೆದು, ಅವರ ಜಾತಿ-ಧರ್ಮ ಕೆದಕಿ ವಿವಾದಕ್ಕೀಡಾಗಿದ್ದ ಸಚಿವ ವಿಜಯ್ ಶಾ ಕ್ಷಮೆಯಾಚನೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅವರ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಗೆ ಆದೇಶಿಸಿದೆ.
ನವದೆಹಲಿ : ಪಾಕ್ ವಿರುದ್ಧದ ಆಪರೇಶನ್ ಸಿಂದೂರದ ವಿವರ ನೀಡುತ್ತಿದ್ದ ಸೇನಾಧಿಕಾರಿ, ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿಯನ್ನು ‘ಪಾಕಿಸ್ತಾನಿ ಉಗ್ರರ ಸಹೋದರಿ’ ಎಂದು ಕರೆದು, ಅವರ ಜಾತಿ-ಧರ್ಮ ಕೆದಕಿ ವಿವಾದಕ್ಕೀಡಾಗಿದ್ದ ಮಧ್ಯಪ್ರದೇಶ ಸಚಿವ ವಿಜಯ್ ಶಾ ಕ್ಷಮೆಯಾಚನೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಅವರ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಗೆ ಆದೇಶಿಸಿದೆ.
ಇದಲ್ಲದೆ, ‘ನಿಮ್ಮ ಹೇಳಿಕೆಯಿಂದ ಇಡೀ ದೇಶವೇ ನಾಚಿಕೆಪಡುತ್ತಿದೆ. ಕ್ಷಮೆಯಾಚನೆಯು ಮೊಸಳೆ ಕಣ್ಣೀರು ಇದ್ದಂತೆ. ಇದು ನ್ಯಾಯಾಂಗ ಕ್ರಮದಿಂದ ತಪ್ಪಿಸಿಕೊಳ್ಳುವ ಕ್ರಮವೇ’ ಎಂದು ಗರಂ ಆಗಿದೆ.
ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ಶಾ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ। ಸೂರ್ಯ ಕಾಂತ್ ಮತ್ತು ನ್ಯಾ। ಎನ್ ಕೋಟಿಶ್ವರ್ ಸಿಂಗ್ ನೇತೃತ್ವದ ತ್ರಿಸದಸ್ಯ ಪೀಠ, ‘ಇಡೀ ದೇಶ ಈ ಹೇಳಿಕೆಯಿಂದ ನಾಚಿಕ ಪಡುತ್ತಿದೆ. ನೀವು ಹೇಳಿರುವ ವಿಡಿಯೋವನ್ನು ನೋಡಿದ್ದೇವೆ. ನೀವು ಬಹಳ ಅಸಹ್ಯ ಪದಗಳನ್ನು ಬಳಸುವ ಅಂಚಿನಲ್ಲಿ ಇದ್ದಿದ್ದೀರಿ. ಆದರೆ ಅದು ಹೇಗೋ ಆ ರೀತಿ ಆಗಲಿಲ್ಲ. ನಿಮ್ಮ ಹೇಳಿಕೆಯ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ಇಡೀ ದೇಶ ಸೇನೆಯ ಬಗ್ಗೆ ಹೆಮ್ಮೆ ಪಡುತ್ತಿದೆ. ಆದರೆ ನೀವು ಮಾತ್ರ ರೀತಿ ಹೇಳಿಕೆಯನ್ನು ನೀಡಿದ್ದೀರಿ’ ಎಂದು ಚಾಟಿ ಬೀಸಿತು.
ಸಚಿವರ ಕ್ಷಮೆ ಬಗ್ಗೆಯೂ ಗರಂ ಆದ ಸುಪ್ರೀಂ ‘ಇದು ಯಾವ ರೀತಿಯ ಕ್ಷಮೆ? ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಬೇಕಿತ್ತು. ಆದರೆ ಕ್ಷಮೆಯಲ್ಲಿ ಕೂಡ ಕೆಲವು ಷರತ್ತು ಹಾಕಿದ್ದೀರಿ. ಕ್ಷಮೆ ಕೇಳುವ ರೀತಿ ಇದಲ್ಲ. ನೀವು ಮಾಡಿದ ಈ ರೀತಿ ಅಸಭ್ಯ ಹೇಳಿಕೆಗಳನ್ನು ನೋಡಿ ನಾಚಿಕೆಪಡಬೇಕು’ ಎಂದಿತು.
ಇನ್ನು ಸಚಿವರ ವಿರುದ್ಧ ದಾಖಲಾಗಿರುವ ಎಫ್‌ಐಅರ್ ತನಿಖೆಗೆ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ಸುಪ್ರೀಂ ರಚಿಸಲು ಆದೇಶಿಸಿದ್ದು, ಮೇ 29ರೊಳಗೆ ಮೊದಲ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.