ಸಾರಾಂಶ
ಪಟನಾ : ‘ಮತಪಟ್ಟಿಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಬಿಹಾರದಲ್ಲಿ ಮತ ಅಧಿಕಾರ ಯಾತ್ರೆ ಕೈಗೊಂಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಗಯಾ ಜಿಲ್ಲೆಯಲ್ಲಿ ಇಡೀ ಗ್ರಾಮದ ಜನರು ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಕರಡು ಮತಪಟ್ಟಿಯಲ್ಲಿ ತೋರಿಸಲಾಗಿದೆ’ ಎಂದು ಆಪಾದಿಸಿದ್ದಾರೆ.
‘ಚುನಾವಣಾ ಆಯೋಗದ ಜಾದೂ ನೋಡಿ’ ಎಂಬ ವ್ಯಂಗ್ಯದೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ‘ನಿದಾನಿ ಗ್ರಾಮದ ಬಾರಾಛಟ್ಟಿ ಕ್ಷೇತ್ರದ ಎಲ್ಲಾ 947 ಮತದಾರರು 6ನೇ ಸಂಖ್ಯೆಯ ಮನೆಯಲ್ಲಿದ್ದಾರೆ. ಇದು ಒಂದು ಹಳ್ಳಿಯ ಕತೆ. ಇನ್ನು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಏನೇನಾಗಿರಬಹುದು’ ಎಂದು ಪ್ರಶ್ನಿಸಿದ್ದಾರೆ.
ಡೀಸಿ ಸ್ಪಷ್ಟನೆ:ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗಯಾ ಜಿಲ್ಲಾಧಿಕಾರಿ, ‘ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ಸಂಖ್ಯೆ ಇರುವುದಿಲ್ಲ. ಅಂಥ ಕಡೆ ಮನೆಗಳಿಗೆ ಯಾವುದಾದರೂ ಒಂದು ಸಾಮಾನ್ಯ ಸಂಖ್ಯೆ ನೀಡಲಾಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಸ್ತರಣೆ ಕೋರಿ ಅರ್ಜಿ ಸಲ್ಲಿಕೆ:ಅತ್ತ ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆಗೆ ದಾಖಲೆಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿರುವ ಸೆ.1ರ ಕೊನೆಯ ದಿನವನ್ನು ವಿಸ್ತರಿಸುವಂತೆ ಕೋರಿ ಆರ್‌ಜೆಡಿ ಮತ್ತು ಎಐಎಂಐಎಂ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆಹೋಗಿವೆ. ಸೆ.1ರಂದು ಇದರ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.