ಎನ್‌ಡಿಎ ಗೆಲ್ಲುವ ಬಗ್ಗೆ ವಿಪಕ್ಷಕ್ಕೂ ವಿಶ್ವಾಸ: ಮೋದಿ

| Published : Apr 13 2024, 01:00 AM IST / Updated: Apr 13 2024, 05:57 AM IST

ಎನ್‌ಡಿಎ ಗೆಲ್ಲುವ ಬಗ್ಗೆ ವಿಪಕ್ಷಕ್ಕೂ ವಿಶ್ವಾಸ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ನಮಗೆ ಲೋಕಸಭೆಗೆ ಸಿಕ್ಕಿದ ಎರಡು ಅವಕಾಶಗಳನ್ನು ನಾವು ದೇಶವನ್ನು ಸುಭದ್ರಪಡಿಸಲು ಬಳಸಿಕೊಂಡರೆ, ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌, ಈ ಅವಧಿಯನ್ನು ಕುಟುಂಬ ಭದ್ರಪಡಿಸಲು ಬಳಸಿಕೊಂಡಿತು.

ನವದೆಹಲಿ: ನಮಗೆ ಲೋಕಸಭೆಗೆ ಸಿಕ್ಕಿದ ಎರಡು ಅವಕಾಶಗಳನ್ನು ನಾವು ದೇಶವನ್ನು ಸುಭದ್ರಪಡಿಸಲು ಬಳಸಿಕೊಂಡರೆ, ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌, ಈ ಅವಧಿಯನ್ನು ಕುಟುಂಬ ಭದ್ರಪಡಿಸಲು ಬಳಸಿಕೊಂಡಿತು. ಹೀಗಾಗಿಯೇ ಇದೀಗ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವ ಬಗ್ಗೆ ವಿಪಕ್ಷಗಳಿಗೂ ವಿಶ್ವಾಸ ಮೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಹಿಂದುಸ್ತಾನ್‌’ ಹಿಂದಿ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ‘ಭ್ರಷ್ಟಾಚಾರ ನಿಗ್ರಹಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ. ಯಾರು ತನಿಖಾ ಸಂಸ್ಥೆಗಳಿಂದ ದಾಳಿಯ ತೂಗುಗತ್ತಿ ಎದುರಿಸುತ್ತಿದ್ದಾರೋ ಅವರೇ, ಕೇವಲ ರಾಜಕೀಯ ಭ್ರಷ್ಟಾಚಾರವನ್ನು ಮಾತ್ರ ಗುರಿಯಾಸಿಕೊಳ್ಳಲಾಗುತ್ತಿದೆ ಎಂಬ ನಿರೂಪಣೆ ಮಾಡುತ್ತಿದ್ದಾರೆ’ ಎಂದು ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಒಟ್ಟು ಪ್ರಕರಣಗಳ ಪೈಕಿ ಕೇವಲ ಶೇ.3ರಷ್ಟು ಪ್ರಕರಣಗಳು ಮಾತ್ರವೇ ರಾಜಕೀಯ ನಂಟು ಹೊಂದಿದೆ. ಉಳಿದ ಶೇ.97ರಷ್ಟು ಪ್ರಕರಣಗಳು ಅಧಿಕಾರಿಗಳು ಮತ್ತು ಕ್ರಿಮಿನಲ್‌ಗಳ ನಂಟು ಇರುವಂಥದ್ದು. ಯಾರು ಭ್ರಷ್ಟ ವ್ಯವಸ್ಥೆಯಿಂದ ಲಾಭ ಪಡೆದುಕೊಳ್ಳುತ್ತಿದ್ದರೋ ಅವರೇ ಇದೀಗ ಅನ್ಯಾಯ ಎಂದು ಗೋಳಿಡುತ್ತಾ ಜನರ ಮುಂದೆ ತಪ್ಪು ಚಿತ್ರಣ ಇಡುತ್ತಿದ್ದಾರೆ ಎಂದು ಮೋದಿ ಅಂಕಿ ಅಂಶ ಸಮೇತ ವಿಪಕ್ಷಗಳಿಗೆ ತಿರುಗೇಟು ನೀಡಿದರು.

2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಭ್ರಷ್ಟಾಚಾರ ನಿಗ್ರಹವನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿದ್ದೇವೆ. ನೇರ ನಗದು ಹಣ ವರ್ಗಾವಣೆ ಯೋಜನೆ ಜಾರಿ ಮಾಡಿದ ಬಳಿಕ, 10 ಕೋಟಿ ನಕಲಿ ಫಲಾನುಭವಿಗಳ ಹೆಸರು ರದ್ದು ಮಾಡಲಾಯಿತು. ಇದರಿಂದಾಗಿ 22.75 ಲಕ್ಷ ಕೋಟಿ ರು. ಹಣ ಅಪಾಯಕಾರಿ ವ್ಯಕ್ತಿಗಳ ಪಾಲಾಗುವುದು ತಪ್ಪಿತು ಎಂದು ಹೇಳಿದರು.

2014ಕ್ಕೂ ಮುನ್ನ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ ಆಸ್ತಿಯ ಮೊತ್ತ 25000 ಕೋಟಿ ರು. ಮಾತ್ರ ಇತ್ತು. ಆದರೆ ಕಳೆದ 10 ವರ್ಷಗಳಲ್ಲಿ ಈ ಮೊತ್ತ 1 ಲಕ್ಷ ಕೋಟಿ ರು. ದಾಟಿದೆ. ಜನರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಕದಿಯುವ ವ್ಯಕ್ತಿಗಳ ವಿರುದ್ಧ ಕ್ರಮ ನಿಲ್ಲುವುದಿಲ್ಲ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಹೇಳಿದರು.

ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಮರಳುವುದರ ಬಗ್ಗೆ ವಿಪಕ್ಷಗಳಿಗೂ ವಿಶ್ವಾಸ ಬಂದಿದೆ. ಹೀಗಾಗಿಯೇ ಅವು ಚುನಾವಣೆ ಪ್ರಚಾರ ನಡೆಸಲೂ ಹಿಂಜರಿಯುತ್ತಿವೆ. ಕೆಲವರಂತೂ ಮತದಾನಕ್ಕೂ ಮೊದಲೇ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ದೂಷಿಸುವ ಕೆಲಸವನ್ನೂ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಜನರು ಬಿಜೆಪಿ ಮಾದರಿ ಆಡಳಿತ ಮತ್ತು ಕಾಂಗ್ರೆಸ್‌ ಮಾದರಿ ಆಡಳಿತವನ್ನು ಹೋಲಿಕೆ ಮಾಡುತ್ತಿದ್ದಾರೆ. ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್‌ ತಮ್ಮ ಕುಟುಂಬವನ್ನು ಭದ್ರಪಡಿಸುವ ಕೆಲಸ ಮಾತ್ರ ಮಾಡಿತು. ಆದರೆ ನಾವು ಕಳೆದ 10 ವರ್ಷಗಳಲ್ಲಿ ದೇಶವನ್ನು; ಹಳ್ಳಿಗಳು, ಬಡವರ ರೈತರು ಮತ್ತು ಮಧ್ಯಮ ವರ್ಗದ ಸಮಾಜವನ್ನು ಭದ್ರಪಡಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಯುವಸಮೂಹದಲ್ಲಿ ಚುನಾವಣೆ ಬಗ್ಗೆ ಉತ್ಸಾಹ ಇಲ್ಲ ಎಂಬುದೆಲ್ಲಾ ವಿಪಕ್ಷಗಳ ವಾದ. ನಮ್ಮ ಕಾರ್ಯಕರ್ತರು ಈಗಾಗಲೇ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರು ಕೂಡಾ ಬೀದಿ ಬೀದಿಗಳಲ್ಲಿ ‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ ಎಂಬ ಘೋಷಣೆ ಮೊಳಗಿಸುತ್ತಿದ್ದಾರೆ. ಪಕ್ಷವೊಂದು 10 ವರ್ಷಗಳ ಅಧಿಕಾರ ನಡೆಸಿದ ಬಳಿಕವೂ ಇಂಥದ್ದೊಂದು ವಾತಾವರಣವನ್ನ ನಾವು ವಿಶ್ವದಲ್ಲಿ ಹಿಂದೆ ಕಂಡಿದ್ದು ಯಾವಾಗ? ಎಂದು ಮೋದಿ ಪ್ರಶ್ನಿಸಿದರು.

ಭಾರತವೀಗ ವಿಶ್ವದ 5ನೇ ದೊಡ್ಡ ಆರ್ಥಿಕತೆ:

ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಮತ್ತು ಭಾರತ ವಿಶ್ವದಲ್ಲೇ ಅತ್ಯಂತ ಬೃಹತ್‌ ಸ್ಟಾರ್ಟಪ್‌ ಪರಿಸರ ಹೊಂದಿದೆ ಎಂಬುದನ್ನು ಜನರು ಕೂಡಾ ಗಮನಿಸಿದ್ದಾರೆ. 500 ವರ್ಷಗಳ ಕಾಯುವಿಕೆ ಬಳಿಕ ನಿರ್ಮಾಣಗೊಂಡ ರಾಮಮಂದಿರ, ಸಂವಿಧಾನದ 370ನೇ ವಿಧಿ ರದ್ದು ಜನರ ಉತ್ಸಾಹ ಹೆಚ್ಚಿಸಿವೆ. ನಮ್ಮ 10 ವರ್ಷಗಳ ಸಾಧನಾ ಪಟ್ಟಿಯೇ ಬಿಜೆಪಿ ತನ್ನ ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬುದಕ್ಕೆ ಸಾಕ್ಷಿ. ನಾವು ಇದೀಗ ಜನಸಮೂಹದ ಜೊತೆ ಸೇರಿಕೊಂಡು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದು ಮೋದಿ ಹೇಳಿದರು.