ಸಂಸತ್ತೇ ಸರ್ವೋಚ್ಚ: ಮತ್ತೆಸುಪ್ರೀಂಗೆ ಧನಕರ್‌ ತಿರುಗೇಟು

| Published : Apr 23 2025, 12:30 AM IST

ಸಾರಾಂಶ

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಗಳಿಗೆ ಮಸೂದೆಗಳಿಗೆ ಸಹಿ ಹಾಕಲು 3 ತಿಂಗಳು ಗಡುವು ನೀಡಿದ್ದನ್ನು ಪ್ರಶ್ನಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್‌, ‘ಸಂಸತ್ತು ಸರ್ವೋಚ್ಚವಾದುದು. ಸಂಸತ್ತಿನ ಮೇಲೆ ಯಾವುದೇ ಸಂಸ್ಥೆಯೂ ಅಧಿಕಾರ ನಡೆಸಲು ಸಾಧ್ಯವಿಲ್ಲ. ಚುನಾಯಿತ ಪ್ರತಿನಿಧಿಗಳೇ ಸರ್ವೋಚ್ಚ ಮಾಲೀಕರು’ ಎಂದು ಹೇಳಿದ್ದಾರೆ.

- ಚುನಾಯಿತ ಪ್ರತಿನಿಧಿ ಮೇಲೆ ಯಾರಿಗೂ ಅಧಿಕಾರವಿಲ್ಲ

- ಸುಪ್ರೀಂ ವ್ಯತಿರಿಕ್ತ ತೀರ್ಪುಗಳ ಬಗ್ಗೆ ಆಕ್ರೋಶ

- ತುರ್ತುಸ್ಥಿತಿ ಪರ ಒಬ್ಬ ಜಡ್ಜ್‌ ತೀರ್ಪು ನೀಡಿದ್ದರು: ಕಿಡಿನವದೆಹಲಿ: ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರಪತಿಗಳಿಗೆ ಮಸೂದೆಗಳಿಗೆ ಸಹಿ ಹಾಕಲು 3 ತಿಂಗಳು ಗಡುವು ನೀಡಿದ್ದನ್ನು ಪ್ರಶ್ನಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್‌, ‘ಸಂಸತ್ತು ಸರ್ವೋಚ್ಚವಾದುದು. ಸಂಸತ್ತಿನ ಮೇಲೆ ಯಾವುದೇ ಸಂಸ್ಥೆಯೂ ಅಧಿಕಾರ ನಡೆಸಲು ಸಾಧ್ಯವಿಲ್ಲ. ಚುನಾಯಿತ ಪ್ರತಿನಿಧಿಗಳೇ ಸರ್ವೋಚ್ಚ ಮಾಲೀಕರು’ ಎಂದು ಹೇಳಿದ್ದಾರೆ.

ದಿಲ್ಲಿ ವಿವಿ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಮೇಲೆ ಮತ್ತೆ ಹರಿಹಾಯ್ದರು.

‘ಒಂದು ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಪೀಠಿಕೆಯು ಸಂವಿಧಾನದ ಭಾಗವಲ್ಲ ಎಂದು ಹೇಳುತ್ತದೆ... ಇನ್ನೊಂದು ಪ್ರಕರಣದಲ್ಲಿ ಅದು ಪೀಠಿಕೆಯ ಭಾಗ ಎಂದು ಹೇಳುತ್ತದೆ. ಆದರೆ ಸಂವಿಧಾನದ ಬಗ್ಗೆ ಯಾವುದೇ ಸಂದೇಹ ಬೇಡ. ಚುನಾಯಿತ ಪ್ರತಿನಿಧಿಗಳು ಸಂವಿಧಾನ ಏನಾಗುತ್ತದೆ ಅಂತಿಮ ಮಾಸ್ಟರ್‌ಗಳಾಗಿರುತ್ತಾರೆ. ಅವರ ಮೇಲೆ ಯಾವುದೇ ಸಂಸ್ಥೆಗೆ ಅಧಿಕಾರ ನಡೆಸಲು ಸಾಧ್ಯವಿಲ್ಲ’ ಎಂದರು.

1967 ರ ಐ.ಸಿ. ಗೋಲಕ್‌ನಾಥ್ ಪ್ರಕರಣ ಮತ್ತು 1973 ರ ಕೇಶವಾನಂದ ಭಾರತಿ ಪ್ರಕರಣಗಳಲ್ಲಿ ವಿರೋಧಾತ್ಮಕ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ ನೀಡಿದ್ದನ್ನು ಹಾಗೂ ತುರ್ತುಸ್ಥಿತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳ ತೀರ್ಪಿಗೆ ವ್ಯತಿರಿಕ್ತ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದ್ದನ್ನೂ ಅವರು ಉದಾಹರಿಸಿದರು.

‘ತುರ್ತುಸ್ಥಿತಿಯನ್ನು ‘ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅತ್ಯಂತ ಕರಾಳ ಹಂತ’ ಎಂದು ಕರೆದಿದ್ದ ಮತ್ತು ಮೂಲಭೂತ ಹಕ್ಕುಗಳ ಅಮಾನತು ವಿರುದ್ಧ 9 ಹೈಕೋರ್ಟ್‌ಗಳು ನೀಡಿದ ತೀರ್ಪುಗಳಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲೇ ಭಿನ್ನಸ್ವರ ಕೇಳಿಬಂದಿತ್ತು. ಇದನ್ನು ನಾನು ಅತಿ ಕರಾಳ ಎಂದು ಕರೆಯುತ್ತೇನೆ. ಏಕೆಂದರೆ ಮೂಲಭೂತ ಹಕ್ಕುಗಳನ್ನು ಯಾವತ್ತೂ ಹತ್ತಿಕ್ಕಲು ಸಾಧ್ಯವಿಲ್ಲ’ ಎಂದರು.

ಇದಲ್ಲದೆ ಸುಪ್ರೀಂ ಕೋರ್ಟನ್ನು ಟೀಕಿಸಿದ್ದ ತಮ್ಮ ಬಗ್ಗೆ ಕೇಳಿಬಂದ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ‘ಸಾಂವಿಧಾನಿಕ ಪದಾಧಿಕಾರಿ ಮಾತನಾಡುವ ಪ್ರತಿಯೊಂದು ಪದವೂ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಯ ಮಾರ್ಗದರ್ಶನಕ್ಕೆ ಒಳಗಾಗಿರುತ್ತದೆ’ ಎಂದರು.

==

ಸಂವಿಧಾನವೇ ಸರ್ವೋಚ್ಚ: ಧನಕರ್‌ಗೆ ಸಿಬಲ್‌ ತಿರುಗೇಟು

ನವದೆಹಲಿ: ಸಂಸತ್ತು ಅಥವಾ ಕಾರ್ಯಾಂಗವಲ್ಲ, ಸಂವಿಧಾನವೇ ಸರ್ವೋಚ್ಚ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶದ ಕುರಿತ ಟೀಕೆ ಮಾಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಸಿಬಲ್‌ ತರಾಟೆಗೆ ತೆಗೆದುಕೊಂಡಿದ್ದು, ‘ನ್ಯಾಯಾಲಯ ಹೇಳಿದ ಎಲ್ಲವೂ ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ. ಸುಪ್ರೀಂ ಕೋರ್ಟ್ ಸಂಸತ್ತು ಹಾಗೂ ಕಾನೂನುಗಳನ್ನು ಪರಾಮರ್ಶಿಸುವ ಪೂರ್ಣ ಅಧಿಕಾರವನ್ನು ಹೊಂದಿದೆ’ ಎಂದು ಪರಿಚ್ಛೇದ 142ನ್ನು ಉಲ್ಲೇಖಿಸಿದ್ದಾರೆ.

==

ದುಬೆ ವಿಡಿಯೋ ತೆಗೆವ ಬಗ್ಗೆ ಮುಂದಿನ ವಾರ ವಿಚಾರಣೆ: ಸುಪ್ರೀಂ

- ಸುಪ್ರೀಂ ಕೋರ್ಟನ್ನು ಟೀಕಿಸಿದ್ದ ಬಿಜೆಪಿ ಸಂಸದ

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಅದರ ಮುಖ್ಯ ನ್ಯಾಯಾಧೀಶ ನ್ಯಾ। ಸಂಜೀವ್‌ ಖನ್ನಾ ಅವರನ್ನು ಟೀಕಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವ ಕುರಿತ ವಿಚಾರಣೆಯನ್ನು ಮುಂದಿನ ವಾರ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ.‘ದೇಶದಲ್ಲಿ ನಾಗರಿಕ ಯುದ್ಧಕ್ಕೆ ಸಿಜೆಐ ಕಾರಣ ಎಂದು ದುಬೆ ಅವರು ಹೇಳಿದ್ದ ವಿಡಿಯೋ ವೈರಲ್‌ ಆಗಿತ್ತು. ಬಳಿಕ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸುಪ್ರೀಂ ಕೋರ್ಟ್‌ ಬಗ್ಗೆ ಅವಹೇಳನಕಾರಿ ಪರಪ್ರಯೋಗ ಮಾಡಿದ್ದರು. ಇದು ಗಂಭೀರ ವಿಚಾರ’ ಎಂದು ವಕೀಲರೊಬ್ಬರು, ನ್ಯಾ। ಬಿ.ಆರ್‌. ಗವಾಯಿ ಮತ್ತು ಅಗಸ್ಟಿನ್‌ ಜಾರ್ಜ್‌ ಮಾಶಿ ಅವರ ಪೀಠದೆದುರು ಹೇಳಿದ್ದರು. ಅಂತೆಯೇ, ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕೇಸಿಗೆ ಅನುಮತಿ ಕೋರಿದ್ದರೂ ಅಟಾರ್ನಿ ಜನರಲ್‌ ವೆಂಕಟರಮಣಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮುಂದಿ ವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

==

ಕಾಂಗ್ರೆಸ್ಸಿಂದ ಕೋರ್ಟ್‌ಗಳ ದುರ್ಬಳಕೆ: ದುಬೆ ವಾಗ್ದಾಳಿ

- ಅಸ್ಸಾಂ ಹೈಕೋರ್ಟ್‌ಗೆ ಕಾಂಗ್ರೆಸ್ಸಿಗನ ನೇಮಕ: ದುಬೆ

- ಬಿಜೆಪಿಯಿಂದಲೂ ದುರ್ಬಳಕೆ: ಕಾಂಗ್ರೆಸ್‌ ತಿರುಗೇಟು

ನವದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಂಗಳವಾರ ಕಾಂಗ್ರೆಸ್ ಹಾಗೂ ಕೋರ್ಟ್‌ಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ತನಗೆ ಬೇಕಾದವರನ್ನು ನ್ಯಾಯಾಧೀಶರನ್ನಾಗಿ ನೇಮಿಸಿತ್ತು ಎಂದು ಟೀಕಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿ, ‘ಬಿಜೆಪಿ, ಜನಸಂಘ, ಆರೆಸ್ಸೆಸ್‌ಗಳು ಜಡ್ಜ್‌ಗಳನ್ನು ದ್ದುಬಳಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ’ ಎಂದಿದೆ.ಟ್ವೀಟ್‌ ಮಾಡಿರುವ ದುಬೆ, ‘ಬಹರುಲ್ ಇಸ್ಲಾಂ ಸಾಹೀಬ್ 1951 ರಲ್ಲಿ ಅಸ್ಸಾಂನಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಅವರನ್ನು 1962 ರಲ್ಲಿ ಹಾಗೂ 68ರಲ್ಲಿ 2 ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತು. ಅವರು ರಾಜ್ಯಸಭೆ ಸದಸ್ಯ ಹುದ್ದೆಗೆ ರಾಜೀನಾಮೆ ನೀಡುವ ಮುನ್ನವೇ 1972ರಲ್ಲಿ ಅವರನ್ನು ಅಸ್ಸಾಂ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು. ನಂತರ 1980ರಲ್ಲಿ ಸುಪ್ರೀಂ ಕೋರ್ಟಿಗೆ ಪದೋನ್ನತಿ ಕೊಡಿಸಿ, ನಿವೃತ್ತಿ ಬಳಿಕ 1983ರಲ್ಲಿ ರಾಜ್ಯಸಭೆಗೆ ನೇಮಿಸಿತ್ತು’ ಎಂದು ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಗುಮನ್‌ ಮಲ್‌ ಲೋಧಾ 1969 ರಿಂದ 1971 ರವರೆಗೆ ಜನಸಂಘ ರಾಜಸ್ಥಾನದ ಅಧ್ಯಕ್ಷರಾಗಿದ್ದರು. ಅವರು 1972 ರಿಂದ 1977 ರವರೆಗೆ ರಾಜಸ್ಥಾನ ಶಾಸಕರಾಗಿದ್ದರು ಮತ್ತು ಅನೇಕ ಸಮಿತಿಗಳ ಮುಖ್ಯಸ್ಥರಾಗಿದ್ದರು. ನಂತರ, ಜನತಾ ಪಕ್ಷದ ಸರ್ಕಾರದಲ್ಲಿ ಜನಸಂಘದ ಕೃಪೆಯಿಂದ, ಅವರು 1978 ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಾಧೀಶರಾದರು. 1988 ರಲ್ಲಿ, ಗುಮನ್ ಮಾಲ್ ಅವರನ್ನು ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ಮಾಡಲಾಯಿತು’ ಎಂದಿದ್ದಾರೆ.