ಸಾರಾಂಶ
ಮುಂಬೈ: ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ಬಿಜೆಪಿ ಮತ್ತು ಏಕನಾಥ ಶಿಂಧೆಯವರ ಶಿವಸೇನೆಯಿಂದ ದೂರವಿದ್ದರೆ, ಅವರ ಮತ್ತು ಉದ್ಧವ್ ಠಾಕ್ರೆ ನಡುವೆ ಯಾವುದೇ ಸಮಸ್ಯೆ ಉದ್ಭವಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ಶಿವಸೇನೆ (ಯುಬಿಟಿ)ಯ ಮುಖವಾಣಿ ಸಾಮ್ನಾ ಪತ್ರಿಕೆ ಹೇಳಿದೆ. ಈ ಮೂಲಕ ಪತ್ರಿಕೆಯ ಮುಖಾಂತರ ರಾಜ್‌ಗೆ ಉದ್ಧವ್ ಷರತ್ತು ವಿಧಿಸಿದಂತಾಗಿದೆ.
2 ದಶಕಗಳ ಹಿಂದೆ ಬೇರೆಯಾಗಿದ್ದ ಸೋದರಸಂಬಂಧಿಗಳಾದ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಗಾಢವಾಗಿರುವ ನಡುವೆ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಈ ರೀತಿ ಬರೆದಿರುವುದು ಪ್ರಾಮುಖ್ಯ ಪಡೆದುಕೊಂಡಿದೆ. ‘ರಾಜ್ ಠಾಕ್ರೆ ಮರಾಠಿ ಅಸ್ಮಿತೆ ಕುರಿತು ಮಾತಾಡುತ್ತಾರೆ. ಶಿವಸೇನೆ (ಅವಿಭಜಿತ) ಹುಟ್ಟಿಕೊಂಡಿದ್ದು ಸಹ ಅದೇ ಕಾರಣಕ್ಕಾಗಿ. ಅವರು ಪ್ರತ್ಯೇಕವಾಗಿದ್ದರೆ ಮರಾಠಿಗರಿಗೇ ಸಮಸ್ಯೆ’ ಎಂದಿರುವ ಅದು ರಾಜ್ ಮತ್ತು ಉದ್ಧವ್ ನಡುವಿನ ಮೈತ್ರಿ ಸಾಧ್ಯತೆಯ ಸುಳಿವು ನೀಡಿದೆ.
ಇದೇ ವೇಳೆ, ‘ಬಿಜೆಪಿ ಮತ್ತು ಶಿಂಧೆ ಬಣ ಈ ಕುರಿತು ಮಾತಾಡಲು ಅಧಿಕಾರವಿಲ್ಲ’ ಎಂದು ಚಾಟಿ ಬೀಸಿದೆ.