ಬಿಜೆಪಿ 18 ಶಾಸಕರ ಅಮಾನತು ವಾಪಸ್‌ ಪಡೆಯುವಂತೆ ಸ್ಪೀಕರ್‌ಗೆ ಮನವಿ : ಖಾದರ್‌ ಭರವಸೆ

| N/A | Published : Apr 22 2025, 01:51 AM IST / Updated: Apr 22 2025, 05:14 AM IST

ಸಾರಾಂಶ

ಪಕ್ಷದ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ಬಿಜೆಪಿ ನಾಯಕರ ನಿಯೋಗ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.

 ಬೆಂಗಳೂರು : ಪಕ್ಷದ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ಬಿಜೆಪಿ ನಾಯಕರ ನಿಯೋಗ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಕೆ.ರಾಮಮೂರ್ತಿ, ಮುನಿರಾಜು ಮತ್ತಿತರರು ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ಕೆಲಕಾಲ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ವಿಧಾನಸಭೆಯಲ್ಲಿ ನಡೆದ ಘಟನೆ ವಿಧಾನಸಭೆಗೆ ಸೀಮಿತವಾಗಬೇಕಿತ್ತು. ಇದು ಮುಂದುವರೆದು ಸಮಿತಿ ಸಭೆಗಳಿಗೂ ಅಮಾನತು ಆದೇಶ ಅನ್ವಯಯವಾಗುವಂತೆ ಮಾಡಿರುವುದು ಸರಿಯಲ್ಲ ಎಂದರು.

ಈ ರೀತಿಯ ಘಟನೆ ಇದೇ ಮೊದಲ ಬಾರಿ ನಡೆದಿಲ್ಲ. ಹಿಂದೆಯೂ ಇಂಥ ಅನೇಕ ಘಟನೆಗಳು ನಡೆದಿವೆ. ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರುವ ಉದ್ದೇಶ ಪಕ್ಷದ ಶಾಸಕರಿಗೆ ಇರಲಿಲ್ಲ. ಸಚಿವ ಕೆ.ಎನ್‌.ರಾಜಣ್ಣ ಅವರ ಹನಿಟ್ರ್ಯಾಪ್‌ ವಿಷಯ ಮುಂದಿಟ್ಟುಕೊಂಡು ನಾವು ಒಂದು ಪ್ರತಿಪಕ್ಷವಾಗಿ ಹೋರಾಟ ಮಾಡಿದ್ದೇವೆ ಅಷ್ಟೇ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್‌, ಈ ಬಗ್ಗೆ ಪರಿಶೀಲಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಸ್ಪೀಕರ್ ಖಾದರ್ ಅವರು ಭರವಸೆ ನೀಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.