ಸಾರಾಂಶ
ಟೊರಂಟೋ: ತಮ್ಮ ಆಡಳಿತದ ಬಗ್ಗೆ ಹಾಗೂ ಭಾರತ ವಿರೋಧಿ ನಿಲುವುಗಳಿಂದ ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜಾಗವನ್ನು ಅವರದೇ ಪಕ್ಷದ ಮಾರ್ಕ್ ಕಾರ್ನಿ (59) ಅವರು ಅಲಂಕರಿಸಲಿದ್ದಾರೆ. ಟ್ರುಡೋ ರಾಜೀನಾಮೆ ಘೋಷಣೆಯಿಂದ ತೆರವಾಗಿದ್ದ ಪ್ರಧಾನಿ ಹುದ್ದೆಗೆ ನಡೆದ ಮತದಾನದಲ್ಲಿ ಕಾರ್ನಿ ಸೋಮವಾರ ಆಯ್ಕೆಯಾಗಿದ್ದಾರೆ.
ಈ ಮೊದಲು ಕೆನಡಾದ ಕೇಂದ್ರೀಯ ಬ್ಯಾಂಕ್‌ನ ಅದ್ಯಕ್ಷರಾಗಿದ್ದ ಕಾರ್ನಿ ಶೇ.85 ಮತ ಪಡೆದು ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಕ್ರಿಸ್ಟೀನಾ ಫ್ರೀಲ್ಯಾಂಡ್ ಕೇವಲ ಶೇ.8 ಮತ ಪಡೆದಿದ್ದಾರೆ.
ಕೆನಡಾದ ರಫ್ತಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ತೆರಿಗೆ(ಶೇ.25) ಹೇರಿರುವ ಹೊತ್ತಿನಲ್ಲೇ ಈ ಆಯ್ಕೆಯಾಗಿರುವುದು ಮಹತ್ವ ಪಡೆದುಕೊಂಡಿದೆ.
ಟ್ರಂಪ್ ವಿರುದ್ಧ ವಾಗ್ದಾಳಿ:
ಪ್ರಧಾನಿಯಾಗಿ ಚುನಾಯಿತರಾಗುತ್ತಿದ್ದಂತೆ ಟ್ರಂಪ್ ವಿರುದ್ಧ ಹರಿಹಾಯ್ದಿರುವ ಕಾರ್ನಿ, ‘ಅವರು ನಮ್ಮ ಉತ್ಪನ್ನಗಳ ಮೇಲೆ ನ್ಯಾಯಸಮ್ಮತವಲ್ಲದ ತೆರಿಗೆಗಳನ್ನು ವಿಧಿಸಿ ಜನಸಾಮಾನ್ಯರ ಮೇಲೆ ದಾಳಿ ನಡೆಸುತ್ತಿದ್ದಾರೆ. ನಾವು ಈ ಯುದ್ಧಕ್ಕೆ ಸಿದ್ಧ’ ಎಂದರು. ಜೊತೆಗೆ, ಕೆನಡಾವನ್ನು ಅಮೆರಿಕದ 51ನೇ ರಾಜ್ಯ ಮಾಡುವ ಟ್ರಂಪ್ ಪ್ರಸ್ತಾವಕ್ಕೆ ತಿರುಗೇಟು ನೀಡಿ, ‘ಕೆನಡಾ ಎಂದೂ, ಯಾವ ರೀತಿಯಲ್ಲೂ ಅಮೆರಿಕದ ಭಾಗವಾಗದು’ ಎಂದರು.
ಆರ್ಥಿಕ ಸಂಕಟ ಪರಿಹಾರಕ ಕಾರ್ನಿ
ಬ್ಯಾಂಕ್ ಆಫ್ ಕೆನಡಾದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾರ್ನಿ ದೇಶವನ್ನು 2008ರ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ್ದರು. ಈ ಯಶಸ್ಸಿನಿಂದಾಗಿಯೇ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ ನಿರ್ಧಾರವನ್ನು ಎಲ್ಲಾ ಪಕ್ಷಗಳು ಸ್ವಾಗತಿಸಿವೆ.
ಭಾರತದ ಜತೆ ಸುಮಧುರ ಬಾಂಧವ್ಯ?
ಖಲಿಸ್ತಾನಿ ಉಗ್ರರನ್ನು ಪೋಷಿಸಿ ನಿರ್ಗಮಿತ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತವನ್ನು ಎದುರು ಹಾಕಿಕೊಂಡಿದ್ದರು. ಆದರೆ ಕಾರ್ನಿ ಅವಧಿಯಲ್ಲಿ ಭಾರತ-ಕೆನಡಾ ಬಾಂಧವ್ಯ ಸುಧಾರಣೆ ನಿರೀಕ್ಷೆಯಿದೆ. ಕಳೆದ ವಾರ ಮಾತನಾಡಿದ್ದ ಅವರು, ‘ಭಾರತದೊಂದಿಗೆ ಸಂಬಂಧ ಪುನರ್ನಿರ್ಮಿಸಲು ಅವಕಾಶಗಳಿವೆ. ನಾನು ಪ್ರಧಾನಿಯಾದರೆ ಆ ಅವಕಾಶಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದರು.