ಸಾರಾಂಶ
ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷಕ್ಕೆ ರಾಜೀನಾಮೆ ನೀಡಿದ 2 ದಿನಗಳ ಬಳಿಕ ‘ಜಾರ್ಖಂಡ್ ಹುಲಿ’ ಎಂದೇ ಖ್ಯಾತರಾದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಶುಕ್ರವಾರ ಬಿಜೆಪಿ ಸೇರಿದರು.
ಇಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರ ಸಮ್ಮುಖದಲ್ಲಿ ಚಂಪೈ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿಕೊಂಡರು. ಇದರಿಂದ ಆದಿವಾಸಿಗಳ ರಾಜ್ಯವಾದ ಜಾರ್ಖಂಡ್‌ನಲ್ಲಿ ಜೆಎಂಎಂಗೆ ಭಾರೀ ಹಿನ್ನಡೆಯಾಗಿದೆ.
ನನಗೆ ಅವಮಾನ, ಬೇಹುಗಾರಿಕೆ:
ನಂತರ ಮಾತನಾಡಿದ ಚಂಪೈ, ‘ಜೆಎಂಎಂ ಪಕ್ಷಕ್ಕೆ ಬೆವರು ಸುರಿಸಿದ್ದೇನೆ. ಆದರೆ ಪಕ್ಷ ನನ್ನನ್ನು ಅವಮಾನಿಸಿತ್ತು. ಜಾರ್ಖಂಡ್ ಸರ್ಕಾರ ನನ್ನ ಮೇಲೆ ಬೇಹುಗಾರಿಕೆ ಕೆಲಸ ಮಾಡಿತ್ತು. ದಿಲ್ಲಿ ಮತ್ತು ಕೋಲ್ಕತ್ತಾದಲ್ಲಿ ನಮ್ಮ ಮೇಲೆ ಪಕ್ಷದ ಕೆಲವರು ನಿಗಾ ಇಟ್ಟಿದ್ದರು ಎಂದು ಹೇಳಿದರು. ಬಿಜೆಪಿಗೆ ಸೇರ್ಪಟೆಯಾಗಿ ಬುಡಕಟ್ಟು ಜನರಿಗೆ ನ್ಯಾಯ ಕೊಡಿಸುವುದೇ ನನ್ನ ಧ್ಯೇಯ‘ ಎಂದು ತಿಳಿಸಿದರು. ಚಂಪೈ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರ ಆಪ್ತರಾಗಿದ್ದರು.