ಸಾರಾಂಶ
2008ರಲ್ಲಿ ಸಂಚಲನ ಮೂಡಿಸಿದ್ದ ‘ಜಡ್ಜ್ ಮನೆ ಬಾಗಿಲಿಗೆ ಹಣ ಪತ್ತೆ ಪ್ರಕರಣ’ದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ನ್ಯಾ। ನಿರ್ಮಲ್ ಯಾದವ್ ಅವರನ್ನು ಚಂಡೀಗಢ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.
ಚಂಡೀಗಢ: 2008ರಲ್ಲಿ ಸಂಚಲನ ಮೂಡಿಸಿದ್ದ ‘ಜಡ್ಜ್ ಮನೆ ಬಾಗಿಲಿಗೆ ಹಣ ಪತ್ತೆ ಪ್ರಕರಣ’ದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ನ್ಯಾ। ನಿರ್ಮಲ್ ಯಾದವ್ ಅವರನ್ನು ಚಂಡೀಗಢ ನ್ಯಾಯಾಲಯವು ಶನಿವಾರ ಖುಲಾಸೆಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಮಲಿಕ್ ಅವರು ಇತರ ಆರೋಪಿಗಳಾದ ರವೀಂದರ್ ಸಿಂಗ್ ಭಾಸಿನ್, ರಾಜೀವ್ ಗುಪ್ತಾ ಮತ್ತು ನಿರ್ಮಲ್ ಸಿಂಗ್ ಅವರನ್ನು ಸಹ ಖುಲಾಸೆಗೊಳಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಆದರೆ ನ್ಯಾ। ಯಾದವ್ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಗಿದ್ದು, ಅವರನ್ನು ಖುಲಾಸೆ ಮಾಡಲಾಗಿದೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.
ಏನಿದು ಪ್ರಕರಣ?:
2008ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾ। ನಿರ್ಮಲ್‌ಜೀತ್ ಕೌರ್ ಹಾಗೂ ನ್ಯಾ। ನಿರ್ಮಲ್ ಯಾದವ್ ಎಂಬ ಒಂದೇ ಹೆಸರು ಹೋಲುವ ಇಬ್ಬರು ಜಡ್ಜ್‌ಗಳಿದ್ದರು.
ಈ ವೇಳೆ ನ್ಯಾ। ನಿರ್ಮಲ್‌ಜೀತ್ ಕೌರ್ ಅವರ ನಿವಾಸಕ್ಕೆ 15 ಲಕ್ಷ ರು. ನಗದಿನ ಪ್ಯಾಕೆಟ್ ಬಂದಿತ್ತು. ಕೋರ್ಟಿನ ಗುಮಾಸ್ತರೊಬ್ಬರು ಆ ಪ್ಯಾಕೆಟ್ ಅನ್ನು ನ್ಯಾ। ಕೌರ್ ಮನೆ ಬಾಗಿಲಲ್ಲಿ ಸ್ವೀಕರಿಸಿದ್ದರು.
ಆದರೆ, ಬಳಿಕ ಆ ಪ್ಯಾಕೆಟ್ ನ್ಯಾ। ನಿರ್ಮಲ್ ಯಾದವ್ ಅವರಿಗೆ ಸೇರಿದ್ದಾಗಿತ್ತು ಮತ್ತು ಹೆಸರುಗಳು ಹೋಲುತ್ತಿರುವ ಕಾರಣ ತಪ್ಪಾಗಿ ನ್ಯಾ। ನಿರ್ಮಲ್ ಯಾದವ್ ಬದಲು ನ್ಯಾ। ನಿರ್ಮಲ್‌ಜೀತ್ ಕೌರ್ ಮನೆಗೆ ತಲುಪಿಸಲಾಗಿತ್ತು ಎಂದು ಗೊತ್ತಾಗಿತ್ತು. ಆಗ ಸಿಬಿಐ ಈ ಹಣದ ಮೂಲ ಪತ್ತೆಗೆ ತನಿಖೆ ಆರಂಭಿಸಿತ್ತು.