ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮ ಕುಸಿತದ 25 ಗಂಟೆ ಬದುಕಿನ ಅತ್ಯಂತ ಕರಾಳ ಅನುಭವಗಳು..

| N/A | Published : Mar 03 2025, 01:50 AM IST / Updated: Mar 03 2025, 04:44 AM IST

ಸಾರಾಂಶ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಹಿಮಕುಸಿತ 8 ಜನರ ಬದುಕನ್ನು ಆಪೋಷನ ತೆಗೆದುಕೊಂಡಿದೆ. 46 ಮಂದಿ ಬದುಕುಳಿದಿದ್ದಾರೆ. ಆ ಹೋರಾಟದಲ್ಲಿ ಗೆದ್ದು ಬಂದಿರುವ ಹಲವರು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಹಿಮಕುಸಿತ 8 ಜನರ ಬದುಕನ್ನು ಆಪೋಷನ ತೆಗೆದುಕೊಂಡಿದೆ. 46 ಮಂದಿ ಬದುಕುಳಿದಿದ್ದಾರೆ. ಆ ಹೋರಾಟದಲ್ಲಿ ಗೆದ್ದು ಬಂದಿರುವ ಹಲವರು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

‘ಅಂದು ಹಿಮಕುಸಿತವಾಗಿ ನಾವು ಮಲಗಿದ್ದ ಕಂಟೇನರ್‌ ನೂರಾರು ಮೀ. ಕೆಳಗೆ ಉರುಳತೊಡಗಿತು. ಏನು ನಡೆಯುತ್ತಿದೆ ಎಂಬುದೇ ತಿಳಿಯಲಿಲ್ಲ. ಕೆಲ ಕ್ಷಣಗಳಲ್ಲಿ ನನ್ನ ಸಹೋದ್ಯೋಗಿಯೊಬ್ಬ ಹೆಣವಾಗಿದ್ದ. ನನ್ನ ಕಾಲು, ತಲೆಗೆ ಪೆಟ್ಟು ಬಿತ್ತು. ಹೇಗೋ ಕಷ್ಟಪಟ್ಟು ಸಮೀಪದ ಹೋಟೆಲ್‌ಗೆ ತೆರಳಿದೆವು. ಅಲ್ಲಿ ಹಸಿವಾದರೂ, ನೀರಡಿಕೆಯಾದರೂ ಇದ್ದದ್ದು ಹಿಮ ಮಾತ್ರ. ಆ ಭೀಕರ ಚಳಿಯಲ್ಲಿ 15ಕ್ಕೂ ಅಧಿಕ ಮಂದಿಯ ಬಳಿಯಿದ್ದದ್ದು ಒಂದೇ ಒಂದು ಹೊದಿಕೆ. ಅಲ್ಲಿ ಕಳೆದ 25 ಗಂಟೆಗಳು ನಮ್ಮ ಬದುಕಿನ ಅತ್ಯಂತ ಕರಾಳ ಕ್ಷಣಗಳು’ ಎಂದು ಬಿಆರ್‌ಒ ಸಿಬ್ಬಂದಿ ಜಗಬೀರ್ ಸಿಂಗ್ ಕಹಿಘಟನೆಯನ್ನು ಮೆಲುಕು ಹಾಕಿದ್ದಾರೆ.

ಅವಘಡದಲ್ಲಿ ಜೀವ ಉಳಿಸಿಕೊಂಡ ಮತ್ತೊಬ್ಬ ಸಿಬ್ಬಂದಿ ಮನೋಜ್ ಭಂಡಾರಿ, ‘ನಮ್ಮ ಸುತ್ತ 3-4 ಅಡಿ ಹಿಮ ಸುರಿದಿತ್ತು. ಓಡುವುದೂ ಸಾಧ್ಯವಿರಲಿಲ್ಲ. ಆದರೆ ಹೇಗೋ ಸೇನಾ ಅತಿಥಿ ಗೃಹವನ್ನು ತಲುಪಿದೆವು. 2-3 ಗಂಟೆಗಳ ಬಳಿಕ ರಕ್ಷಣಾ ತಂಡ ಬಂದಿದ್ದರಿಂದ ಜೀವ ಉಳಿಯಿತು’ ಎನ್ನುತ್ತಾರೆ.

‘ನಾವು ಸುಮಾರು 12 ಗಂಟೆ ಕಾಲ ಹಿಮದಡಿ ಚದುರಿ ಬಿದ್ದಿದ್ದೆವು. ಹಿಮ ನಮ್ಮ ಮೂಗಿನ ಹೊಳ್ಳೆಗಳನ್ನು ಮುಚ್ಚಿ, ಉಸಿರಾಡಲು ಕಷ್ಟವಾಗುತ್ತಿತ್ತು. ಅದೃಷ್ಟವಶಾತ್ ಸೈನ್ಯ ರಕ್ಷಣೆಗೆ ಬಂದು ಬದುಕಿಕೊಂಡೆವು’ ಎಂದು ಬಿಹಾರದ ಮುನ್ನಪ್ರಸಾದ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬಿಹಾರದ ಅವಿನಾಶ ಕುಮಾರ್, ಯುಪಿಯ ಚಂದ್ರಭಾನ್, ಹಿಮಾಚಲದ ವಿಪಿನ್ ಕುಮಾರ್, ಉತ್ತರಾಖಂಡದ ಗಣೇಶ್ ಕುಮಾರ್.. ಹೀಗೆ ಸಾವನ್ನು ಗೆದ್ದುಬಂದ ಒಬ್ಬೊಬ್ಬರ ಅನುಭವವೂ ಭಯಾನಕವಾಗಿದೆ.

ಬದರಿನಾಥ ಹಿಮ ಕುಸಿತ : ರಕ್ಷಣೆ ಅಂತ್ಯ, ಸಾವಿನ ಸಂಖ್ಯೆ 8ಕ್ಕೆ, 46 ಜನರ ರಕ್ಷಣೆ

ಡೆಹ್ರಾಡೂನ್‌: ಉತ್ತರಾಖಂಡದ ಬದರೀನಾಥ ಸಮೀಪ ಗಡಿ ರಸ್ತೆ ಸಂಸ್ಥೆ (ಬಿಆರ್‌ಓ) ಶಿಬಿರದ ಮೇಲೆ ಸಂಭವಿಸಿದ್ದ ಹಿಮಕುಸಿತದಲ್ಲಿ ಸಿಲುಕಿದ್ದ 4 ಕಾರ್ಮಿಕರ ಮೃತದೇಹಗಳನ್ನು ಭಾನುವಾರ ಹೊರತೆಗೆಯಲಾಗಿದೆ. ಇದರೊಂದಿಗೆ ಘಟನೆಯಲ್ಲಿ ಮೃತರ ಸಂಖ್ಯೆ 8ಕ್ಕೆ ತಲುಪಿದ್ದು. ಅದರ ಬೆನ್ನಲ್ಲೇ 60 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಮಡಿದ್ದು ಒಟ್ಟು 46 ಜನರನ್ನು ರಕ್ಷಣೆ ಮಾಡಲಾಗಿದೆ.ದ್ದು, 8 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದರೀನಾಥ - ಮಾಣಾ ನಡುವಿನ ಗಡಿ ರಸ್ತೆ ಸಂಸ್ಥೆ (ಬಿಆರ್‌ಓ) ಶಿಬಿರದ ಮೇಲೆ ಶುಕ್ರವಾರ ಮುಂಜಾನೆ ಭಾರಿ ಹಿಮಕುಸಿತ ಸಂಭವಿದ ಪರಿಣಾಮ 8 ಕಂಟೈನರ್‌ ಮತ್ತು 1 ಶೆಡ್‌ನಲ್ಲಿದ್ದ 54 ಕಾರ್ಮಿಕರು ಹಿಮದಡಿ ಸಿಲುಕಿದ್ದರು. ಇವರ ರಕ್ಷಣೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸೇರಿ ರಕ್ಷಣಾ ಪಡೆಗಳ 200ಕ್ಕೂ ಹೆಚ್ಚು ಸಿಬ್ಬಂದಿ ಶ್ರಮಿಸಿ ಶನಿವಾರ 50 ಜನರನ್ನು ರಕ್ಷಣೆ ಮಾಡಿದರು. ಈ ಪೈಕಿ ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು, ಉಳಿದ ನಾಲ್ವರ ಶವ ಭಾನುವಾರ ಪತ್ತೆಯಾಗಿದೆ.ರಕ್ಷಿಸಲ್ಪಟ್ಟ 46 ಜನರ ಪೈಕಿ 44 ಜ್ಯೋರ್ತಿಮಠದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಋಷಿಕೇಶದ ಏಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.