ಸಾರಾಂಶ
40-55 ವರ್ಷ ವಯಸ್ಸಿನ ಜನರಲ್ಲಿ ಕಂಡುಬರುವ ಸಮೀಪ ದೃಷ್ಟಿದೋಷವನ್ನು ಸರಿಪಡಿಸುವ ಐ ಡ್ರಾಪ್ ಅನ್ನು ಭಾರತೀಯ ಔಷಧ ತಯಾರಕರು ಅಭಿವೃದ್ಧಿಪಡಿಸಿದ್ದಾರೆ. 'ಪ್ರೆಸ್‌ವು' ಎಂಬ ಈ ಔಷಧವು ಕೇವಲ 15 ನಿಮಿಷಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು 6 ಗಂಟೆಗಳವರೆ ಪರಿಣಾಮ ಬೀರುತ್ತದೆ.
ಮುಂಬೈ: 40-55ರ ವಯೋಮಾನದವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದ ದೃಷ್ಟಿದೋಷ ನಿವಾರಿಸುವ ಔಷಧವೊಂದನ್ನು ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.
ಮುಂಬೈ ಮೂಲದ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಎನ್ನುವ ಖಾಸಗಿ ಕಂಪನಿ ‘ಪ್ರೆಸ್‌ವು’ ಎಂಬ ಐಡ್ರಾಪ್ ಅಭಿವೃದ್ಧಿಪಡಿಸಿದ್ದು, ಇದರ ಮಾರಾಟಕ್ಕೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಈ ಔಷಧ ಹತ್ತಿರದ ವಸ್ತುಗಳನ್ನು ನೋಡುವುದರಲ್ಲಿ ಇರುವ ದೃಷ್ಟಿ ದೋಷ ಕಡಿಮೆ ಮಾಡುತ್ತದೆ. ಇದಕ್ಕೆ 350 ರು.ಗೆ ದರ ನಿಗದಿಪಡಿಸಲಾಗಿದೆ.
ಐ ಡ್ರಾಪ್‌ನ ಒಂದು ಹನಿ ಕೇವಲ 15 ನಿಮಿಷದಲ್ಲಿ ಕೆಲಸ ನಿರ್ವಹಿಸುವುದಕ್ಕೆ ಪ್ರಾರಂಭಿಸುತ್ತದೆ. ಇದರ ಪರಿಣಾಮ 6 ಗಂಟೆಗಳ ತನಕವೂ ಇರಲಿದೆ. ಮೊದಲ ಹನಿ ಹಾಕಿದ 3 ರಿಂದ 6 ಗಂಟೆಯ ಒಳಗೆ ಎರಡನೇ ಐ ಡ್ರಾಪ್ಸ್ ಹಾಕಿದರೆ ಅದರ ಪರಿಣಾಮ ಸುದೀರ್ಘ ಅವಧಿಗೆ ಇರಲಿದೆ ಎಂದು ಕಂಪನಿ ಹೇಳಿದೆ.