ಸಾರಾಂಶ
ನವದೆಹಲಿ: ಅಹಮಾದಾಬಾದ್ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ ತಮ್ಮವರ ಮೃತದೇಹದ ಬದಲಾಗಿ ಇನ್ಯಾರದ್ದೋ ಮೃತದೇಹವನ್ನು ತಪ್ಪಾಗಿ ಕಳಿಸಿಕೊಡಲಾಗಿದೆ ಎಂದು ಬ್ರಿಟನ್‌ನ 2 ಕುಟುಂಬಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
ಜೂ.12ರ ದುರಂತದಲ್ಲಿ ಮೃತಪಟ್ಟ 12-13 ಜನರ ಶವಗಳನ್ನು ಬ್ರಿಟನ್ನಿಗೆ ಕಳಿಸಿಕೊಡಲಾಗಿತ್ತು. ಆ ಪೈಕಿ 2 ಶವಗಳು ತಮ್ಮ ಡಿಎನ್‌ಎಯೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ತಪ್ಪಾಗಿ ಬೇರೆ ಯಾರದ್ದೋ ಶವಗಳನ್ನು ಕಳಿಸಿಕೊಟ್ಟಿದ್ದಾರೆಂದು 2 ಬ್ರಿಟಿಷ್ ಕುಟುಂಬಗಳು ಆರೋಪಿಸಿವೆ.
ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ‘ದುರಂತದ ನಂತರ, ಅಧಿಕಾರಿಗಳು ಸ್ಥಾಪಿತ ಶಿಷ್ಟಾಚಾರ ಮತ್ತು ತಾಂತ್ರಿಕತೆಯ ಪ್ರಕಾರವೇ ಮೃತರ ಗುರುತು ಪತ್ತೆ ಹಚ್ಚಿದ್ದಾರೆ. ಎಲ್ಲಾ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಮತ್ತು ಮೃತರ ಘನತೆಗೆ ಧಕ್ಕೆ ಬರದಂತೆ ಗೌರವದಿಂದ ನಿರ್ವಹಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ನಾವು ಬ್ರಿಟನ್ ಅಧಿಕಾರಿಗಳೊಂದಿಗೆ ಕೆಲಸ ಮುಂದುವರಿಸುತ್ತೇವೆ’ ಎಂದಿದೆ.