ಗೆದ್ದರೆ ಮಹಿಳೆಯರಿಗೆ₹30000: ಆರ್‌ಜೆಡಿ!- ಸಂಕ್ರಾಂತಿಗೆ ಒಂದೇ ಕಂತಲ್ಲಿ ಹಣ ಬಿಡುಗಡೆ- ಬಿಹಾರದಲ್ಲಿ ತಾರಕಕ್ಕೇರಿದ ಉಚಿತ ಭರವಸೆ

| Published : Nov 05 2025, 01:45 AM IST

ಗೆದ್ದರೆ ಮಹಿಳೆಯರಿಗೆ₹30000: ಆರ್‌ಜೆಡಿ!- ಸಂಕ್ರಾಂತಿಗೆ ಒಂದೇ ಕಂತಲ್ಲಿ ಹಣ ಬಿಡುಗಡೆ- ಬಿಹಾರದಲ್ಲಿ ತಾರಕಕ್ಕೇರಿದ ಉಚಿತ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

‘ಇಂಡಿಯಾ’ ಸಿಎಂ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ‘ನಾವು ಅಧಿಕಾರಕ್ಕೆ ಬಂದರೆ ಮಾಯಿ- ಬೆಹನ್‌ ಯೋಜನೆ ಅಡಿ 30 ಸಾವಿರ ರು.ಗಳನ್ನು ಮಹಿಳೆಯರಿಗೆ ಒಂದೇ ಕಂತಿನಲ್ಲಿ ಸಂಕ್ರಾಂತಿ ವೇಳೆ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.

- ಮಹಿಳೆಯರಿಗೆ 10 ಸಾವಿರ ರು. ನೀಡುವ ಯೋಜನೆಗೆ ಚಾಲನೆ ನೀಡಿದ್ದ ಪಿಎಂ ಮೋದಿ

- ಇದಕ್ಕೆ ಸಡ್ಡು ಹೊಡೆಯುವ ಯೋಜನೆ ಪ್ರಕಟಿಸಿದ ಆರ್‌ಜೆಡಿ ಸಿಎಂ ಅಭ್ಯರ್ಥಿ ತೇಜಸ್ವಿ

- ಅಧಿಕಾರಕ್ಕೆ ಬಂದರೆ ಸಂಕ್ರಾಂತಿ ದಿನ ಸ್ತ್ರೀಯರಿಗೆ 30 ಸಾವಿರ ರು. ನೀಡುವ ಘೋಷಣೆ

- ಮಾಸಿಕ 2500 ರು. ನೀಡುವ ಸ್ಕೀಂ ಮಾರ್ಪಡಿಸಿ ಒಂದೇ ಕಂತಲ್ಲಿ ಹಣ ನೀಡುವ ಪ್ರಕಟಣೆ

--

ಪಿಟಿಐ ಪಟನಾ

ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಗ್ಯಾರಂಟಿ ಹಾಗೂ ಉಚಿತ ಕೊಡುಗೆಗಳ ಭರವಸೆ ಮಳೆ ತಾರಕಕ್ಕೇರಿದೆ. ಒಂದು ಬಾರಿಗೆ ಮಹಿಳೆಯರಿಗೆ 10 ಸಾವಿರ ರು. ನೀಡುವ ನಿತೀಶ್‌ ಕುಮಾರ್‌ ಸರ್ಕಾರದ ಯೋಜನೆಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈಗ ಇದನ್ನು ಮೀರಿಸುವ ನಿಟ್ಟಿನಲ್ಲಿ ವಿಪಕ್ಷದ ‘ಇಂಡಿಯಾ’ ಸಿಎಂ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ‘ನಾವು ಅಧಿಕಾರಕ್ಕೆ ಬಂದರೆ ಮಾಯಿ- ಬೆಹನ್‌ ಯೋಜನೆ ಅಡಿ 30 ಸಾವಿರ ರು.ಗಳನ್ನು ಮಹಿಳೆಯರಿಗೆ ಒಂದೇ ಕಂತಿನಲ್ಲಿ ಸಂಕ್ರಾಂತಿ ವೇಳೆ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ತೇಜಸ್ವಿ, ‘ಮಾಯಿ- ಬೆಹನ್‌ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 2,500 ರು.ಗಳನ್ನು ವರ್ಗಾಯಿಸುವುದಾಗಿ ನಾವು ಈಗಾಗಲೇ ಭರವಸೆ ನೀಡಿದ್ದೇವೆ. ಈಗ ಮುಂದಿನ ವರ್ಷ ಜ.14ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗಳಿಗೆ ಮುಂಗಡವಾಗಿ (ಇಡೀ ವರ್ಷದ) 30,000 ರು.ಗಳನ್ನು ವರ್ಗಾಯಿಸಲಿದ್ದೇವೆ’ ಎಂದರು.

ಇದೇ ವೇಳೆ, ‘ರಾಜ್ಯದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಬೋನಸ್ ಆಗಿ ಪ್ರತಿ ಕ್ವಿಂಟಲ್ ಭತ್ತಕ್ಕೆ 300 ರು. ಮತ್ತು ಗೋಧಿಗೆ 400 ರು. ನೀಡಲಾಗುವುದು’ ಎಂದೂ ಘೋಷಿಸಿದರು.

‘ಪ್ರಸ್ತುತ ಸರ್ಕಾರವು ಕೃಷಿ ಚಟುವಟಿಕೆಗಳಲ್ಲಿ ಬಳಸುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 55 ಪೈಸೆ ದರ ವಿಧಿಸುತ್ತದೆ. ಆದರೆ ನಾವು ರೈತರಿಗೆ ನೀರಾವರಿ ಉದ್ದೇಶಗಳಿಗಾಗಿ ಉಚಿತ ವಿದ್ಯುತ್ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಅಲ್ಲದೆ, ಎಲ್ಲ ಪ್ರಾಥಮಿಕ ಕೃಷಿ ಸಾಲ ಸಂಘಗಳು, ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ ಮುಖ್ಯಸ್ಥರಿಗೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು ಎಂದೂ ಆಶ್ವಾಸನೆ ನೀಡಿದರು.