ಸಾರಾಂಶ
ಪಟನಾ: ಸದಾ ಕುಡಿದು ನಿಂದಿಸುತ್ತಿದ್ದ ಗಂಡನ ತೊರೆದು ಮಹಿಳೆಯೊಬ್ಬರು ಮನೆಗೆ ಸಾಲ ವಸೂಲಿಗೆ ಬರುತ್ತಿದ್ದ ಏಜೆಂಟ್ ಜೊತೆ ಪರಾರಿಯಾಗಿ ವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ.ಈ ವಿವಾಹಕ್ಕೆ ಏಜೆಂಟ್ ಕುಟುಂಬ ಸಮ್ಮತಿಸಿದ್ದರೆ, ಮಹಿಳೆಯ ಕುಟುಂಬ ವಿರೋಧ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದೆ.
ಏನಿದು ಘಟನೆ?:
ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾರನ್ನು ಇಂದಿರಾ 2022ರಲ್ಲಿ ವಿವಾಹವಾದರು. ಆದರೆ ನಕುಲ್ ಸದಾ ಕುಡಿದು ಇಂದಿರಾಳಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ನಕುಲ್ ಮನೆಗೆ ಭೇಟಿ ನೀಡುತ್ತಿದ್ದ ಹಣಕಾಸು ಕಂಪನಿಯ ಲೋನ್ ಏಜೆಂಟ್ ಪವನ್ ಕುಮಾರ್ ಇಂದಿರಾಗೆ ಭರವಸೆಯಾಗಿ ಕಾಣಿಸಿದ್ದ. ಪವನ್ ಜತೆಗಿನ ಇಂದಿರಾ ವ್ಯಾವಹಾರಿಕ ಪರಿಚಯ ಸ್ನೇಹವಾಯಿತು. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಪವನ್, ಇಂದಿರಾ ಫೆ.4 ರಂದು ವಿಮಾನದಲ್ಲಿ ಪಶ್ಚಿಮ ಬಂಗಾಳದ ಅಸಾನ್ಸೋಲ್‌ಗೆ ಪರಾರಿಯಾಗಿದ್ದಳು. ಫೆ.11ಕ್ಕೆ ಹಿಂದೂ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿ ಜಮುಯಿಗೆ ಮರಳಿದ್ದರು.
ಇಬ್ಬರ ಕೊಂದು ತಾನೂ ಪ್ರಾಣ ಬಿಟ್ಟ ಮಣಿಪುರ ಸಿಆರ್‌ಪಿಎಫ್ ಯೋಧ
ಇಂಫಾಲ್: ಸಿಆರ್‌ಪಿಎಫ್ ಯೋಧನೊಬ್ಬ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಕೊಂದು, 8 ಸಿಬ್ಬಂದಿಯನ್ನು ಗಾಯಗೊಳಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಭೀಕರ ಘಟನೆ ಮಣಿಪುರದಲ್ಲಿ ನಡೆದಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ರಾತ್ರಿ 8.20ರ ಸುಮಾರಿಗೆ ಈ ಘಟನೆ ನಡೆದಿದೆ. 120ನೇ ಬೆಟಾಲಿಯನ್‌ನ ಹವಾಲ್ದಾರ್ ಸಂಜಯ್ ಸಿಂಗ್ ಎಂಬಾತ ಶಿಬಿರದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಕಾನ್‌ಸ್ಟೆಬಲ್ ಮತ್ತು ಒಬ್ಬ ಸಬ್ ಇನ್ಸ್‌ಪೆಕ್ಟರ್ ಸಾವನ್ನಪ್ಪಿದರೆ, ಇತರೆ 8 ಜನರು ಗಾಯಗೊಂಡಿದ್ದಾರೆ. ಬಳಿಕ ಸಂಜಯ್ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ಮೇಲೆ ಕೇಂದ್ರದ ಒತ್ತಡವಿರಲಿಲ್ಲ: ಬಿಬಿಸಿಗೆ ನ್ಯಾ.ಚಂದ್ರಚೂಡ್ ತಿರುಗೇಟು
ನವದೆಹಲಿ: ತಾವು ಭಾರತದ ಮುಖ್ಯ ನ್ಯಾಯಾಧೀಶ ಆಗಿದ್ದಾಗ ತಮ್ಮ ಮೇಲೆ ಬಿಜೆಪಿ ಒತ್ತಡವಿತ್ತು ಎಂಬ ಆರೋಪವನ್ನು ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ ನಿರಾಕರಿಸಿದ್ದಾರೆ. ‘ನನ್ನ ಮೇಲೆ ಸರ್ಕಾರದ ಯಾವುದೇ ಒತ್ತಡ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಬಿಸಿಗೆ ಸಂದರ್ಶನ ನೀಡಿದ ಅವರು, ‘ಭಾರತ ಏಕಪಕ್ಷದ (ಬಿಜೆಪಿ) ದೇಶ ಆಗುತ್ತಿದೆ’ ಎಂದು ಈ ಹಿಂದೆ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ವರದಿಯನ್ನೂ ನಿರಾಕರಿಸಿದ್ದಾರೆ. ‘2024ರ ಚುನಾವಣೆ ಭಾರತ ಏಕಪಕ್ಷದ ದೇಶ ಅಲ್ಲ ಎಂದು ಸಾಬೀತು ಮಾಡಿದೆ. ಪ್ರಾದೇಶಿಕವಾಗಿ ಪ್ರಬಲ ಆಗಿದ್ದ ಅನೇಕ ಪಕ್ಷಗಳು ಉತ್ತಮ ಸಾಧನೆ ಮಾಡಿ, ಆ ವರದಿಯನ್ನು ಸುಳ್ಳು ಮಾಡಿವೆ’ ಎಂದಿದ್ದಾರೆ.ಇದೇ ವೇಳೆ, ಭಾರತದ ನ್ಯಾಯಾಂಗವು ಮೇಲ್ವರ್ಗದ ಹಾಗೂ ಪುರುಷರ ಪ್ರಾಬಲ್ಯ ಹೊಂದಿದೆ ಎಂಬ ವಾದವೂ ಸುಳ್ಳು ಎಂದಿದ್ದಾರೆ. ಇತ್ತೀಚಿನ ಕೆಳ ನ್ಯಾಯಾಲಯಗಳ ನೇಮಕದಲ್ಲಿ ಮಹಿಳೆಯರ ಪಾಲು ಶೇ.50 ಇದೆ. ಕೆಲವು ರಾಜ್ಯಗಳಲ್ಲಿ ಮಹಿಳೆಯರ ಪಾಲು ಶೇ.60ರಿಂದ 70ರಷ್ಟಿದೆ ಎಂದಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸೆ ನಿಜ:
ವಿಶ್ವಸಂಸ್ಥೆ ವರದಿಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದ್ದು ನಿಜ ಎಂದು ವಿಶ್ವಸಂಸ್ಥೆಯ ಸತ್ಯಶೋಧನಾ ಸಮಿತಿ ವರದಿ ನೀಡಿದೆ. ಇದು ಹಿಂದೂಗಳ ಮೇಲಿನ ಹಿಂಸಾಚಾರದ ಘಟನೆಯನ್ನು ‘ಉತ್ಪ್ರೇಕ್ಷಿತ ಪ್ರಚಾರ’ ಎಂದು ಪದೇ ಪದೇ ತಿರಸ್ಕರಿಸಿದ್ದ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್‌ಗೆ ಭಾರೀ ಮುಖಭಂಗ ಉಂಟು ಮಾಡಿದೆ.
ವರದಿಯಲ್ಲೇನಿದೆ?:ಶೇಖ್ ಹಸೀನಾ ಭಾರತಕ್ಕೆ ಪರಾರಿಯಾಗುವ ಮುನ್ನವೇ ಹಿಂದೂಗಳ ಮೇಲೆ ದಾಳಿ ಆರಂಭವಾಗಿತ್ತು. ಜೊತೆಗೆ 2024ರ ಆಗಸ್ಟ್‌ನಲ್ಲಿ ಹಸೀನಾ ಪದಚ್ಯುತಿ ಬಳಿಕ ಹಿಂದೂಗಳು, ಅಹಮದೀಯ ಮುಸ್ಲಿಮರು ಮತ್ತು ಸ್ಥಳೀಯ ಬುಡಕಟ್ಟು ಜನರ ಮನೆ, ಪ್ರಾರ್ಥನಾ ಸ್ಥಳಗಳ ಮೇಲೆ ಉದ್ದೇಶಪೂರ್ವಕ ದಾಳಿ ನಡೆದವು ಎಂದು ವರದಿ ಹೇಳಿದೆ.
ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ 2000ಕ್ಕೂ ಹೆಚ್ಚು ದಾಳಿ ನಡೆದಿದ್ದು, ಕನಿಷ್ಠ 5 ಹಿಂದೂಗಳು ಸಾವನ್ನಪ್ಪಿದ್ದರು.