ಲಖನೌ: 21 ಮಂದಿಯನ್ನು ಬಲಿ ಪಡೆದ ದೆಹಲಿ ರೆಸ್ಟೋರೆಂಟ್‌ ಅಗ್ನಿ ದುರಂತದ ಕರಾಳ ನೆನಪು ಮಾಸುವ ಮುನ್ನವೇ, ಉತ್ತರ ಪ್ರದೇಶದ ಲಖನೌನಲ್ಲಿ ಸೋಮವಾರ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅನಿಮೇಷಕ್‌ ಕೋಚಿಂಗ್‌ ಸೆಂಟರ್‌ ಇದ್ದ 3 ಅಂತಸ್ತಿನ ವಾಣಿಜ್ಯ ಕಟ್ಟಡಕ್ಕೆ ಬೆಂಕಿ ಕೆನ್ನಾಲಿಗೆ ಚಾಚಿದ್ದು, ಹಲವು ವಿದ್ಯಾರ್ಥಿಗಳು ಸೇರಿ 15 ಜನರು ಸಾವನ್ನಪ್ಪಿದ್ದಾರೆ ಹಾಗೂ 7 ಜನರು ಗಾಯಗೊಂಡಿದ್ದಾರೆ.

ಆಗಿದ್ದೇನು?:

ಲಖನೌನ ಉತ್ತರ ಭಾಗದ ಅಲಿಗಂಜ್ ಪ್ರದೇಶದ ಉಷಾ ಮೆಹ್ತಾ ಮಾರ್ಗದಲ್ಲಿರುವ 3 ಅಂತಸ್ತಿನ ವಾಣಿಜ್ಯ ಸಂಕೀರ್ಣಕ್ಕೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಕಿ ತಗುಲಿದೆ. ಬೆಂಕಿ ತ್ವರಿತವಾಗಿ ಇಡೀ ಕಟ್ಟಡವನ್ನು ಆವರಿಸಿದೆ. ಈ ಕಟ್ಟಡದಲ್ಲಿ 2ನೇ ಮಹಡಿಯಲ್ಲಿ ಅನಿಮೇಷನ್ ತರಬೇತಿ ಕೇಂದ್ರ ಮತ್ತು 3ನೇ ಮಹಡಿಯಲ್ಲಿ ಸಾಕುಪ್ರಾಣಿಗಳ ಆಸ್ಪತ್ರೆ ಕೂಡ ಇದ್ದವು.

ಘಟನೆ ನಡೆದಾಗ ಹಲವಾರು ಮಕ್ಕಳು ಅನಿಮೇಷನ್ ಕೇಂದ್ರದಲ್ಲಿದ್ದರು. ಬೆಂಕಿ ಉರಿಯುತ್ತಿರುವಾಗ ಅನೇಕ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ್ದಾರೆ. ಇನ್ನು ಕೆಲವರು ಜೀವ ಉಳಿಸಿಕೊಳ್ಳಲು ಮೇಲ್ಮಹಡಿಗೆ ಓಡಿ ಹೋಗಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.


ಬೆಂಕಿ ಅನಾಹುತದಲ್ಲಿ, ಪೆಟ್‌ ಕ್ಲಿನಿಕ್‌ನಲ್ಲಿದ್ದ ಹಲವು ಪ್ರಾಣಿಗಳನ್ನು ರಕ್ಷಿಸಿದ್ದರೆ, ಇನ್ನು ಕೆಲವು ಸಾವನ್ನಪ್ಪಿವೆ.

ಬೆಂಕಿ ನಿಯಂತ್ರಣಕ್ಕೆ 14 ಫೈರ್ ಎಂಜಿನ್‌ಗಳು, ಹೈಡ್ರಾಲಿಕ್ ಪ್ಲ್ಯಾಟ್‌ಫಾರ್ಮ್, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಧಾವಿಸಿದವು. ರಕ್ಷಣಾ ತಂಡಗಳು ಅಕ್ಕಪಕ್ಕದ ಕಟ್ಟಡದಿಂದ ಗೋಡೆಯನ್ನು ಕೊರೆದು ಒಳಗೆ ಪ್ರವೇಶಿಸಿ ರಕ್ಷಣೆ ನಡೆಸಿದವು. ಫೈರ್‌ಫೈಟರ್‌ಗಳು ಏಣಿಗಳ ಮೂಲಕ ಕಟ್ಟಡವನ್ನು ಏರಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಕೆಲವು ವಿದ್ಯಾರ್ಥಿಗಳನ್ನು ಬಾಡಿಬ್ಯಾಗ್‌ಗಳಲ್ಲಿ ಮತ್ತು ಕೆಲವರನ್ನು ಕಂಬಳಿಯಲ್ಲಿ ಹೊರತೆಗೆಯಲಾಯಿತು. ಬೆಂಕಿಗೆ ಸಿಲುಕಿದ ಮೂಕಪ್ರಾಣಿಗಳನ್ನು ರಕ್ಷಿಸುವ ದೃಶ್ಯಗಳು ಕರುಳು ಕಿವುಚುವಂತಿದ್ದವು.

ಘಟನೆಗೆ ಕಾರಣ ಏನು?:

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಇದ್ದಕ್ಕಿದ್ದಂತೆ ಹೊತ್ತಿಕೊಂಡಿತು ಎನ್ನಲಾಗುತ್ತಿದೆ. ಒಂದು ಕಿಡಿಯಿಂದ ಬೆಂಕಿ ಹಬ್ಬಿರಬಹುದು ಎಂದು ಸ್ಥಳೀಯರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ನಿರ್ಮಾಣ, ವಿದ್ಯುತ್ ಸಂಪರ್ಕ, ಅಗ್ನಿ ಸುರಕ್ಷತಾ ವ್ಯವಸ್ಥೆಗಳಲ್ಲಿ ಲೋಪಗಳಿದ್ದರೆ ಅದನ್ನು ಪತ್ತೆ ಹಚ್ಚಲಾಗುತ್ತಿದೆ.

ಕಾರ್ಯಕ್ರಮ ನಿಲ್ಲಿಸಿದ ಯೋಗಿ:

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲಿಗಢದ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದರು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮುರ್ಮು, ರಾಧಾಕೃಷ್ಣನ್‌, ಮೋದಿ ದಿಗ್ಭ್ರಮೆ:

ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌, ಪ್ರಧಾನಿ ನರೇಂದ್ರ ಮೋದಿ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಮಡಿದವರ ಕುಟುಂಬಕ್ಕೆ ಸಂತಾಪ ಹೇಳಿದ್ದಾರೆ. ಇದೇ ವೇಳೆ ಮಡಿದವರ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 2 ಲಕ್ಷ ರು. ಮತ್ತು ಉತ್ತರಪ್ರದೇಶ ಸಿಎಂ ಯೋಗಿ ತಲಾ 5 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ.