ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಪೊಲೀಸರು ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡಕ್ಕೆ ಸೇರಿದ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಪೊಲೀಸರು ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡಕ್ಕೆ ಸೇರಿದ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಸಲ್ಮಾನ್‌ ಖಾನ್‌ ಮನೆಗೆ ಗುಂಡು ಹಾರಿಸಿದ ಸಾಗರ್‌ ಪಾಲ್ ಮತ್ತು ವಿಕಿ ಗುಪ್ತಾರಿಗೆ ಬಂದೂಕು ನೀಡುವ ಜೊತೆಗೆ ಮುಂಬೈ ನಗರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯ ಜೊತೆಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಮೊಹಮ್ಮದ್‌ ರಫೀಕ್‌ ಚೌಧರಿ ಎಂಬಾತನನ್ನು ರಾಜಸ್ಥಾನದ ನಾಗೌರ್‌ನಲ್ಲಿ ಬಂಧಿಸಲಾಗಿದೆ.

ರಫೀಕ್‌ ಸಲ್ಮಾನ್‌ ಖಾನ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಸುತ್ತ ಐದಕ್ಕೂ ಹೆಚ್ಚು ಬಾರಿ ತಿರುಗಾಡಿ ಮಾಹಿತಿ ಕಲೆ ಹಾಕಿದ್ದ. ಬಳಿಕ ಗುಂಡು ಹಾರಿಸುವ ಮುನ್ನಾ ದಿನ ಪನ್ವೆಲ್‌ನಲ್ಲಿ ಗುಂಡು ಹಾರಿಸಿದ ಪಾಲ್‌ ಮತ್ತು ಗುಪ್ತಾರ ಜೊತೆಗೇ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದುವರೆಗೂ ಪೊಲೀಸರು ಪ್ರಕರಣದಲ್ಲಿ ಇಬ್ಬರು ಗುಂಡು ಹಾರಿಸಿದವರನ್ನೂ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಅನುಜ್‌ ಥಾಪನ್‌ ಎಂಬಾತ ಪೊಲೀಸ್‌ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಲ್ಮಾನ್ ಖಾನ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮೇಲೆ ಏ.14ರ ಮುಂಜಾನೆ ನಾಲ್ಕು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು.