ಕೇರಳದ ಕಲ್ಲಿಕೋಟೆಯಲ್ಲಿ ಐವರಿಗೆ ಸೋಂಕಿತ ಸೊಳ್ಳೆಗಳಿಂದ ಹರಡುವ ವೆಸ್ಟ್‌ನೈಲ್‌ ವೈರಾಣು ರೋಗ ಕಾಣಿಸಿಕೊಂಡಿರುವುದು ತುಸು ಆತಂಕಕ್ಕೆ ಕಾರಣವಾಗಿದೆ.

ಕಲ್ಲಿಕೋಟೆ: ಕೇರಳದ ಕಲ್ಲಿಕೋಟೆಯಲ್ಲಿ ಐವರಿಗೆ ಸೋಂಕಿತ ಸೊಳ್ಳೆಗಳಿಂದ ಹರಡುವ ವೆಸ್ಟ್‌ನೈಲ್‌ ವೈರಾಣು ರೋಗ ಕಾಣಿಸಿಕೊಂಡಿರುವುದು ತುಸು ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಅವರು ಗುಣಮುಖರಾಗಿದ್ದು, ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ಕಾಣಿಸಿಕೊಂಡವರಲ್ಲಿ ಮಕ್ಕಳೂ ಇದ್ದಾರೆ. ಜಿಲ್ಲೆಯಲ್ಲಿ ರ್‍ಯಾಂಡಮ್ ಟೆಸ್ಟ್‌ ನಡೆಸಲಾಗಿದ್ದು, ಈ ವೇಳೆ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.

ಲಕ್ಷಣಗಳೇನು?:

ವೆಸ್ಟ್‌ನೈಲ್‌ ಸೋಂಕು ಪ್ರಮುಖವಾಗಿ ಕ್ಯೂಲೆಕ್ಸ್‌ ತಳಿಯ ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಅದರಿಂದ ಮಾನವರಲ್ಲಿ ಮಾರಣಾಂತಿಕ ನರಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದರೆ ಬಹುತೇಕ ಸೋಂಕಿತರು ಯಾವುದೇ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ತೀವ್ರ ಜ್ವರ ಬರುವುದು ಪ್ರಮುಖ ಲಕ್ಷಣವಾಗಿದ್ದು, ಅಸ್ಪತ್ರೆಯಲ್ಲಿ ಮಾದರಿಯನ್ನು ಸಂಗ್ರಹಿಸಿ ವೈರಾಣು ಸಂಸ್ಥೆಗೆ ಪರಿಶೀಲನೆಗೆ ಕಳುಹಿಸಿದ ಬಳಿಕ ಅದು ವೆಸ್ಟ್‌ನೈಲ್‌ ಸೋಂಕು ಎಂಬುದಾಗಿ ತಿಳಿಯುತ್ತದೆ.