ದಿಢೀರ್‌ ಪ್ರವಾಹದಲ್ಲಿ ಕೊಚ್ಚಿ ಹೋದ 5 ಯೋಧರು

| Published : Jun 30 2024, 12:46 AM IST / Updated: Jun 30 2024, 06:05 AM IST

ಸಾರಾಂಶ

  ಲಡಾಖ್‌ನಲ್ಲಿ ನದಿಯೊಂದರಲ್ಲಿ ಕಾಣಿಸಿಕೊಂಡ ದಿಢೀರ್‌ ಪ್ರವಾಹದಲ್ಲಿ ಭಾರತೀಯ ಸೇನೆಯ 5 ಯೋಧರು ಕೊಚ್ಚಿಹೋದ ದುರ್ಘಟನೆ ಶನಿವಾರ ಸಂಭವಿಸಿದೆ. ಘಟನೆ ಕುರಿತು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

 ಲೇಹ್‌ (ಲಡಾಖ್)     : ಚೀನಾ ಗಡಿಗೆ ಹೊಂದಿಕೊಂಡ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ನದಿಯೊಂದರಲ್ಲಿ ಕಾಣಿಸಿಕೊಂಡ ದಿಢೀರ್‌ ಪ್ರವಾಹದಲ್ಲಿ ಭಾರತೀಯ ಸೇನೆಯ 5 ಯೋಧರು ಕೊಚ್ಚಿಹೋದ ದುರ್ಘಟನೆ ಶನಿವಾರ ಸಂಭವಿಸಿದೆ. ಘಟನೆ ಕುರಿತು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

ಏನಾಯ್ತು?: ಶನಿವಾರ ನಸುಕಿನ ಜಾವ 1 ಗಂಟೆಗೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕರ್‌ ಮೂಲಕ ಶ್ಯೋಕ್‌ ನದಿಯನ್ನು ಐವರು ಸೈನಿಕರು ದಾಟುತ್ತಿದ್ದರು. ಆಗ ಲೇಹ್‌ನಿಂದ 148 ಕಿ.ಮೀ. ದೂರದ ಮಂದಿರ್ ಮೋರ್ಹ್‌ ಎಂಬಲ್ಲಿ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾಗಿದೆ. ಈ ವೇಳೆ ನೀರಿನ ರಭಸಕ್ಕೆ ಟ್ಯಾಂಕರ್‌ ಕೊಚ್ಚಿ ಹೋಗಿ ದುರ್ಘಟನೆ ಸಂಭವಿಸಿದೆ.

‘ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಮಿಲಿಟರಿ ಟ್ಯಾಂಕ್ ಸಿಲುಕಿಕೊಂಡಿತು. ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ಆದಾಗ್ಯೂ, ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ’ ಎಂದು ಭಾರತೀಯ ಸೇನೆಯ ಅಧಿಕೃತ ಹೇಳಿಕೆ ನೀಡಿದೆ.

ರಾಜನಾಥ್‌, ರಾಹುಲ್‌, ಖರ್ಗೆ ಆಘಾತ:

ಕಳೆದುಹೋದ ಸೇನಾ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಅವರ ಮಾದರಿ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಘಟನೆಗೆ ಆಘಾತ ವ್ಯಕ್ತಪಡಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.