ನವದೆಹಲಿ: ಮಧ್ಯಪ್ರಾಚ್ಯ ಕದನ ಸದ್ಯಕ್ಕೆ ಸ್ಥಗಿತವಾಗಿದ್ದರೂ ತೈಲ ಪೂರೈಕೆಯಲ್ಲಿನ ವ್ಯತ್ಯಯ ಮತ್ತು ಕಚ್ಚಾತೈಲದ ಬೆಲೆ ಗಗನಕ್ಕೇರುತ್ತಲೇ ಇರುವ ಕಾರಣ, ಸಂಚಾರವನ್ನೇ ಸ್ಥಗಿತಗೊಳಿಸಬೇಕಾಗಿ ಬರುವ ಬಗ್ಗೆ ದೇಶೀಯ ವಿಮಾನಯಾನ ಸಂಸ್ಥೆಗಳು ಸರ್ಕಾರಕ್ಕೆ ಮಾಹಿತಿ ನೀಡಿವೆ. ಅಲ್ಲದೆ ಸರ್ಕಾರ ತೈಲ ಬೆಲೆ ಇಳಿಕೆಗೆ ಮುಂದಾಗದೇ ಹೋದಲ್ಲಿ ಪರಿಸ್ಥಿತಿ ಕೈಮೀರಲಿವೆ ಎಂದು ತಮ್ಮ ಅಳಲು ತೋಡಿಕೊಂಡಿವೆ.

ಇತ್ತೀಚಿನ ಇಂಡಿಗೋ ವಿಮಾನಯಾನ ಸಂಸ್ಥೆಯ ಎಡವಟ್ಟಿನಿಂದ ಇಡೀ ದೇಶದ ವಿಮಾನಯಾನ ವಲಯ ಕಂಗೆಟ್ಟ ಘಟನೆಯ ಕಹಿನೆನಪು ಮಾಸುವ ಮುನ್ನವೇ ಇದೀಗ ಏರ್‌ ಇಂಡಿಯಾ ಸೇರಿ ಕನಿಷ್ಠ 3 ವಿಮಾನಯಾನ ಕಂಪನಿಗಳು ಕೇಂದ್ರ ಸರ್ಕಾರದ ಮುಂದೆ ತಮ್ಮ ಸಂಕಷ್ಟವನ್ನು ಬಿಚ್ಚಿಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಪತ್ರದಲ್ಲಿ ಏನಿದೆ?:

ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟವು (ಎಫ್‌ಐಎ) ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ‘ಎಟಿಎಫ್‌ ಬೆಲೆಯಲ್ಲಿನ ಹೆಚ್ಚಳವು ವಿಮಾನಯಾನ ಸಂಸ್ಥೆಗಳಿಗೆ ಭರಿಸಲಾಗದ ನಷ್ಟವನ್ನುಂಟು ಮಾಡುತ್ತಿದೆ. ಪರಿಣಾಮ ವಿಮಾನಗಳ ಹಾರಾಟ ಸ್ಥಗಿತಗೊಳಿಸಬೇಕಾಗುವುದು’ ಎಂದು ಕಳವಳ ವ್ಯಕ್ತಪಡಿಸಿದೆ. ಜತೆಗೆ, ‘ಸರ್ಕಾರ ಕೂಡಲೇ ಹಸ್ತಕ್ಷೇಪಕ್ಕೆ ಮಾಡಿ ಆರ್ಥಿಕ ನೆರವು ನೀಡಬೇಕು. ಕ್ರ್ಯಾಕ್‌ ಬ್ಯಾಂಡ್‌ ವಿಧಾನದ ಮೂಲಕ ಕಚ್ಚಾತೈಲ ಮತ್ತು ಸಂಸ್ಕರಿತ ಇಂಧನದ ಬೆಲೆಯನ್ನು ಸಮಾನ ಮಾಡಿ’ ಎಂದು ಆಗ್ರಹಿಸಿದೆ. ಜತೆಗೆ, ಸದ್ಯ ಎಟಿಎಫ್‌ ಮೇಲೆ ವಿಧಿಸಲಾಗಿರುವ ಶೇ.11ರಷ್ಟು ಅಬಕಾರಿ ಸುಂಕವನ್ನು ರದ್ದು ಮಾಡುವಂತೆಯೂ ಕೋರಿದೆ.


ದೇಶೀಯ ವಿಮಾನಗಳಿಗೆ ಭರಿಸುವ ಇಂಧನ ಬೆಲೆಯಲ್ಲಿನ ಹೆಚ್ಚಳವನ್ನು ಲೀಟರ್‌ಗೆ 15 ರು. ಸೀಮಿತಗೊಳಿಸಿರುವ ಸರ್ಕಾರ, ಅಂತಾರಾಷ್ಟ್ರೀಯ ವಿಮಾನಗಳಿಗೆ ಹಾಕುವ ಎಟಿಎಫ್‌ ಅದರ ಏರಿಕೆಯ ಮಿತಿಯನ್ನು ಲೀಟರ್‌ಗೆ 73 ರು. ನಿಗದಿ ಮಾಡಿದೆ. ಆದ್ದರಿಂದ ಗಡಿ ದಾಟಿ ಹಾರುವ ವಿಮಾನಗಳಿಗೆ ಸಮಸ್ಯೆಯಾಗುತ್ತಿದೆ.

ತೈಲ ಶಾಕ್‌:

ವಿಮಾನಯಾನದ ಒಟ್ಟು ವೆಚ್ಚದಲ್ಲಿ ಶೇ.40ರಷ್ಟು ಪಾಲು ಇಂಧನದ್ದೇ ಆಗಿದ್ದು, ಮಧ್ಯಪ್ರಾಚ್ಯ ಯುದ್ಧ ಆರಂಭದ ಬಳಿಕ ಡಬಲ್‌ ಆಗಿದೆ. ಹೀಗಾಗಿ ವಿಮಾನಯಾನ ಕಂಪನಿಗಳು ಭಾರೀ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿವೆ. ಯುದ್ಧ ಆರಂಭಕ್ಕೂ ಮೊದಲು ಪ್ರತಿ 1000 ಲೀಟರ್‌ ತೈಲಕ್ಕೆ 96000 ರು. ಇದ್ದ ದರ ಯುದ್ಧ ಆರಂಭದ ಬಳಿಕ 2 ಲಕ್ಷ ರು. ದಾಟಿದೆ.