ಸಾರಾಂಶ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬರಗಾಲದ ತೀವ್ರತೆ ಎದುರಿಸುತ್ತಿರುವ ಜನರ ಮೇಲೆ ತೈಲ ಬೆಲೆ ಏರಿಕೆ ತೀವ್ರ ಘಾಸಿ ಮಾಡಿದೆ. ತೈಲ ಬೆಲೆ ಏರಿಕೆಯಿಂದ ಸರಕು ಸಾಗಣೆಯ ಬೆಲೆಯೂ ಹೆಚ್ಚಳಗೊಳ್ಳಲಿದ್ದು, ಪರಿಣಾಮ, ನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಗಗನಮುಖಿಯಾಗಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಮುಖಂಡ ಎ.ದೇವದಾಸ್ ತಿಳಿಸಿದರು.
ಗ್ಯಾರಂಟಿಗಳ ಮೂಲಕ ಜನಸಾಮಾನ್ಯರ ಬದುಕು ಹಸನು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಅದೇ ಜನಗಳ ಮೇಲೆ ತೆರಿಗೆಯ ಭಾರ ಹೊರಿಸುತ್ತಿದೆ. ಒಂದೆಡೆ ಕೊಟ್ಟು ಇನ್ನೊಂದು ಕಡೆ ಕಸಿದುಕೊಳುವ ರಾಜ್ಯ ಸರ್ಕಾರದ ಈ ನೀತಿಯ ವಿರುದ್ಧ ಜನಸಾಮಾನ್ಯರು ಧ್ವನಿ ಎತ್ತಬೇಕು ಎಂದರು.ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಎಂ.ಎನ್. ಮಂಜುಳಾ ಹಾಗೂ ಡಾ. ಎನ್. ಪ್ರಮೋದ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೆಲೆಏರಿಕೆ ನೀತಿಯನ್ನು ಖಂಡಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಶಾಂತಾ, ಗೋವಿಂದ್, ನಾಗರತ್ನಾ, ಪಂಪಾಪತಿ, ಈಶ್ವರಿ, ರಾಜಾ, ರವಿಕಿರಣ್ ಸೇರಿದಂತೆ ನಗರದ ವಿವಿಧ ಪ್ರದೇಶಗಳ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.