ಸಾರಾಂಶ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುರಿದ ಜೂನ್ ತಿಂಗಳ ದಾಖಲೆ ಮಳೆಗೆ ದೇಶದ ಪ್ರಮುಖ ರಾಜಕಾರಣಿಗಳೂ ತತ್ತರಿಸಿ ಹೋಗಿದ್ದಾರೆ. ಸಂಸದರ ಕ್ವಾರ್ಟರ್ಸ್‌ಗಳು ಇರುವ ಲೂಟನ್ಸ್ ವಲಯದ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕೈಕೊಟ್ಟು ರಸ್ತೆಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಸಂಸತ್ ಅಧಿವೇಶನಕ್ಕೆ ತೆರಳಲು ಸಿದ್ಧರಾಗುತ್ತಿದ್ದ ಸಂಸದರು ಕಂಗಾಲಾಗಿದ್ದಾರೆ.
ಚಂಡೀಗಢ ಕಾಂಗ್ರೆಸ್ ಸಂಸದ ಮನೀಶ್ ಅವರ ಮನೆಯ ಮುಂದೆ ಮೊಳಕಾಲುದ್ದ ನೀರು ಬಂದ ಪರಿಣಾಮ ಅವರು ಪ್ಯಾಂಟನ್ನು ಮೊಳಕಾಲುವರೆಗೆ ಮಡಚಿಕೊಂಡು, ಕೈಯಲ್ಲಿ ಬೂಟು ಹಾಗೂ ಬ್ಯಾಟು ಹಿಡಿದು ನಡೆದು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಶಶಿ ತರೂರ್ ಅವರ ಮನೆಯ ಮುಂದೆ ಕೂಡ ನಡುಮಟ್ಟಕ್ಕೆ ಪ್ರವಾಹ ಬಂದಿತ್ತು. ಈ ವಿಡಿಯೋ ವೈರಲ್ ಆಗಿದೆ. ಕೊನೆಗೆ ದಿಲ್ಲಿ ಪಾಲಿಕೆ ಕಾರ್ಮಿಕರು ನೀರನ್ನು ಪಂಪ್ ಮಾಡುವಲ್ಲಿ ಯಶಸ್ವಿಯಾದ ಪರಿಣಾಮ, ತರೂರ್ ಲೋಕಸಭೆ ಅಧಿವೇಶನಕ್ಕೆ ಹೋದರು.
ಇನ್ನು ಲೋಧಿ ಎಸ್ಟೇಟ್‌ನಲ್ಲಿರುವ ಎಸ್‌ಪಿ ಸಂಸದ ರಾಮಗೋಪಾಲ ಯಾದವ್ ಅವರ ಮನೆ ಮುಂದೆ ಕೂಡ ಮೊಳಕಾಲುದ್ದ ನೀರು ಬಂದಿತ್ತು. ವರ್ಮಾ ಅವರಿಗೆ ವಯಸ್ಸಾಗಿರುವ ಕಾರಣ ಅವರನ್ನು ಅವರ ಇಬ್ಬರು ಆಪ್ತರು ಎತ್ತಿಕೊಂಡು ಕಾರಿನಲ್ಲಿ ಕೂರಿಸಿದರು. ಈ ವಿಡಿಯೋ ಕೂಡ ವೈರಲ್ ಆಗಿದೆ. ಇದು ‘ವಿವಿಐಪಿ ದರ್ಬಾರು. ಹಿಂದೆ ಅಂದಿನ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ರನ್ನೂ ಇದೇ ರೀತಿ ಅವರ ಸಿಬ್ಬಂದಿ, ಪ್ಯಾಂಟು-ಚಪ್ಪಲಿ ಒದ್ದೆ ಆಗಬಾರದು ಎಂದು ಪ್ರವಾಹ ಸ್ಥಳದಲ್ಲಿ ಎತ್ತಿಕೊಂಡು ಹೋಗಿದ್ದರು’ ಎಂದು ಜನ ಕಿಡಿಕಾರಿದ್ದಾರೆ.
ಇದೇ ವೇಳೆ, ದಿಲ್ಲಿ ಸಚಿವೆ ಆತಿಶಿ ಮನೆ ಮುಂದೆಯೂ ಪ್ರವಾಹ ಉಂಟಾಗಿತ್ತು.