ಸಾರಾಂಶ
ನವದೆಹಲಿ : ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಎನ್‌ಪಿಎಸ್ ಬದಲಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ತರಬೇಕು ಎಂದು ದೇಶಾದ್ಯಂತ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿಯೇತರ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯ ಸರ್ಕಾರಗಳು ಈಗಾಗಲೇ ಒಪಿಎಸ್ ಅನ್ನು ಜಾರಿಗೆ ಕೂಡ ತಂದಿವೆ.
ಒಪಿಎಸ್ ಬೇಡಿಕೆ ಹಾಗೂ ಎನ್‌ಪಿಎಸ್ ಸಮಸ್ಯೆಗಳ ಬಗ್ಗೆ ದನಿ ಜೋರಾದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಎನ್‌ಪಿಎಸ್ ಅನ್ನು ಪರಿಶೀಲಿಸಿ, ಏನಾದರೂ ಬದಲಾವಣೆಗಳನ್ನು ಮಾಡಬೇಕಿದ್ದರೆ ಶಿಫಾರಸು ಮಾಡುವ ಸಲುವಾಗಿ ಆರ್ಥಿಕ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ಕಳೆದ ವರ್ಷ ಹಣಕಾಸು ಸಚಿವಾಲಯ ರಚನೆ ಮಾಡಿತ್ತು.
ಈ ಸಮಿತಿ ಗಮನಾರ್ಹ ಪ್ರಗತಿಯನ್ನು ಮಾಡಿದೆ ಎಂದು ನಿರ್ಮಲಾ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ. ಸಾಮಾನ್ಯ ನಾಗರಿಕರ ಹಿತವನ್ನು ರಕ್ಷಣೆ ಮಾಡಲು ಪ್ರಸ್ತುತ ವಿಚಾರಗಳನ್ನು ಬಗೆಹರಿಸುವುದರ ಜತೆಗೆ ಆರ್ಥಿಕ ಶಿಸ್ತನ್ನು ನಿರ್ವಹಿಸಲು ಪರಿಹಾರವನ್ನು ಹುಡುಕಲಾಗುತ್ತದೆ ಎಂದು ವಿವರಿಸಿದ್ದಾರೆ.
ಒಪಿಎಸ್ ಯೋಜನೆಯಡಿ ಸರ್ಕಾರಿ ನೌಕರರಿಗೆ ತಮ್ಮ ಕೊನೆಯ ಸಂಬಳದ ಅರ್ಧದಷ್ಟು ಮೊತ್ತ ಪಿಂಚಣಿ ರೂಪದಲ್ಲಿ ಸಿಗುತ್ತಿತ್ತು. ಸರ್ಕಾರ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಿದಾಗ ಆ ಪಿಂಚಣಿ ಮೊತ್ತವೂ ಏರಿಕೆಯಾಗುತ್ತಿತ್ತು.