ಮಾಜಿ ಅಟ್ಲಾಸ್ ಸೈಕಲ್ಸ್ ಅಧ್ಯಕ್ಷ ಸಲೀಲ್ ಕಪೂರ್ ಆತ್ಮಹತ್ಯೆ : ಬರೆದಿರುವ ಡೆತ್ ನೋಟ್ ಪತ್ತೆ

| Published : Sep 04 2024, 01:45 AM IST / Updated: Sep 04 2024, 06:05 AM IST

ಸಾರಾಂಶ

ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಹೊರೆ ಎಂದು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ.

ನವದೆಹಲಿ: ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್‌ ಮಂಗಳವಾರ ದೆಹಲಿಯ ಲ್ಯುಟೆನ್ಸ್‌ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಮಂಗಳವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಕಪೂರ್‌ ತಮ್ಮ ಪರವಾನಗಿ ಇರುವ ರಿವಾಲ್ವರ್‌ನಿಂದ ತಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಅದರಲ್ಲಿ ಆರ್ಥಿಕ ಹೊರೆ ಎಂದು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 9 ಕೋಟಿ ರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ಕಪೂರ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳು ದಾಖಲಾಗಿವೆ.

ಉಗ್ರರ ತಾಯ್ನಾಡು ಪಾಕಲ್ಲಿ ಆಗಸ್ಟ್‌ ತಿಂಗಳೊಂದರಲ್ಲೇ 50 ಭಯೋತ್ಪಾದಕ ದಾಳಿ!

ಇಸ್ಲಾಮಾಬಾದ್‌: ಉಗ್ರರ ತಾಯ್ನಾಡು ಎಂಬ ಕುಖ್ಯಾತಿ ಹೊಂದಿರುವ ಪಾಕಿಸ್ತಾನ ಇದೀಗ ತಾನೇ ಸಾಕಿದ ಹದ್ದಿನಿಂದ ಕುಕ್ಕಿಸಿಕೊಳ್ಳಲು ಆರಂಭಿಸಿದೆ. ಕಳೆದ ಆಗಸ್ಟ್‌ ತಿಂಗಳೊಂದರಲ್ಲೇ ಪಾಕಿಸ್ತಾನದಲ್ಲಿ 59 ಭಯೋತ್ಪಾದನಾ ದಾಳಿಗಳು ನಡೆದಿವೆ. ಈ ದಾಳಿಯಲ್ಲಿ 84 ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ವರ್ಷ ಜನವರಿಯಿಂದೀಚೆಗೆ ದೇಶದಲ್ಲಿ 325 ಉಗ್ರ ದಾಳಿ ನಡೆದಿವೆ. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 88 ಉಗ್ರರು ಹತರಾಗಿದ್ದಾರೆ ಎಂದು ಪಾಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೀಸ್ ಸ್ಟಡೀಸ್‌ ಎಂಬ ಚಿಂತಕರ ಚಾವಡಿ ತನ್ನ ವರದಿಯಲ್ಲಿ ಹೇಳಿದೆ.

23ನೇ ಕಾನೂನು ಆಯೋಗ ರಚಿಸಿದ ಸರ್ಕಾರ: ಯುಸಿಸಿ ಏಕ ಚುನಾವಣೆ ವರದಿ ಹೊಣೆ

ನವದೆಹಲಿ: 22ನೇ ಕಾನೂನು ಆಯೋಗದ ಅವಧಿ ಮುಗಿದ ಹಿನ್ನಲೆಯಲ್ಲಿ ಕೇಂದ್ರ 23ನೇ ಕಾನೂನು ಆಯೋಗವನ್ನು ರಚಿಸಿದೆ. ರಚನೆಯ ಮುಂದಿನ ಭಾಗವಾಗಿ ಅದಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ನೇಮಿಸಲಿದೆ. ಮೂರು ವರ್ಷಗಳ ಅವಧಿಗೆ ಆಯೋಗ ಕಾರ್ಯನಿರ್ವಹಿಸಲಿದೆ.ಇದೇ ಮೊದಲ ಬಾರಿಗೆ ಆಯೋಗಕ್ಕೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರನ್ನು ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ನೇಮಿಸುವ ಅವಕಾಶ ಕಲ್ಪಿಸಲಾಗಿದೆ. ಕಾನೂನು ಆಯೋಗವು ಸಂಕೀರ್ಣ ಕಾನೂನು ವಿಷಯದಲ್ಲಿ ಸರ್ಕಾರಕ್ಕೆ ಅಗತ್ಯ ಸಲಹೆ ನೀಡುವ ಕೆಲಸ ಮಾಡಲಿದೆ.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಏಕ ರೂಪ ನಾಗರಿಕ ಸಂಹಿತೆ ಮತ್ತು ಒಂದು ದೇಶ ಒಂದು ಚುನಾವಣೆ ವಿಷಯದಲ್ಲಿ ಹಿಂದಿನ ಕಾನೂನು ಆಯೋಗ ತನ್ನ ಕೆಲಸ ಆರಂಭಿಸಿತ್ತು. ಆ ಕೆಲಸವನ್ನು ಹಾಲಿ ಆಯೋಗ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಕಾಂಗೋ ಜೈಲಿಂದ ಪರಾರಿ ಯತ್ನದ ವೇಳೆ ಕಾಲ್ತುಳಿತಕ್ಕೆ 129 ಕೈದಿಗಳ ಭೀಕರ ಸಾವು

ಕಿನ್ಷಾಸಾ: ಕಾಂಗೋ ರಾಜಧಾನಿ ಕಿನ್ಷಾಸಾ ಜೈಲಿನಿಂದ ಕೆಲ ಕೈದಿಗಳು ಪರಾರಿಗೆ ಯತ್ನಿಸಿದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 129 ಕೈದಿಗಳು ಸಾವನ್ನಪಿ, 60 ಜನರು ಗಾಯಗೊಂಡ ಘಟನೆ ನಡೆದಿದೆ. ಸೋಮವಾರ ಮುಂಜಾನೆ ಇಲ್ಲಿನ ಮಕಾಲಾ ಜೈಲಿನಿಂದ 24 ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 125 ಜನರು ಸಾವನ್ನಪ್ಪಿದ್ದಾರೆ. ಮಕಾಲಾ ಜೈಲು 1500 ಕೈದಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರೂ, ಅದರಲ್ಲಿ 12000ಕ್ಕೂ ಹೆಚ್ಚು ಕೈದಿಗಳನ್ನು ಇಡಲಾಗಿದೆ.

2023ರಲ್ಲಿ ರೈಲ್ವೆ, ಸರ್ಕಾರಿ ಬ್ಯಾಂಕ್‌ ವಿರುದ್ಧ ಸಿವಿಸಿಗೆ ಅತಿ ಹೆಚ್ಚು ದೂರು ಸಲ್ಲಿಕೆ

ನವದೆಹಲಿ: 2023ರಲ್ಲಿ ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಸರ್ಕಾರಿ ಉದ್ಯೋಗಿಗಳ ವಿರುದ್ಧ ಒಟ್ಟು 74203 ಭ್ರಷ್ಟಾಚಾರದ ದೂರು ಸಲ್ಲಿಕೆಯಾಗಿವೆ. ಈ ಪೈಕಿ ಅತಿ ಹೆಚ್ಚು ದೂರುಗಳು ರೈಲ್ವೆ ಸಿಬ್ಬಂದಿಯ ವಿರುದ್ಧ ಸಲ್ಲಿಸಲಾಗಿದೆ. ನಂತರದ ಸ್ಥಾನಗಳಲ್ಲಿ ದೆಹಲಿಯ ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳಿವೆ. ಇವುಗಳಲ್ಲಿ 7,830 ದೂರುಗಳ ವಿಚಾರಣೆ ಬಾಕಿ ಇದೆ. ಉಳಿದಂತೆ ದೆಹಲಿಯ ಸರ್ಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳು, ಕಲ್ಲಿದ್ದಲು, ಪೆಟ್ರೋಲಿಯಂ, ಕಾರ್ಮಿಕ, ಗೃಹ, ರಕ್ಷಣಾ ಸಚಿವಾಲಯದ ನೌಕರರು, ಕೇಂದ್ರೀಯ ನೇರ ಮತ್ತು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳು ದಾಖಲಾಗಿವೆ.