ಸಾರಾಂಶ
ಕೋಲ್ಕತಾ: ತರಬೇತಿನಿರತ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಗುರಿಯಾಗಿರುವ ಕೋಲ್ಕತಾದ ಆರ್‌ಜಿ ಕರ್ ವೈದ್ಯ ಕಾಲೇಜಿನ ಮುಖ್ಯಸ್ಥ ಹುದ್ದೆಗೆ ಘಟನೆ ಬಳಿಕ ರಾಜೀನಾಮೆ ನೀಡಿದ ಡಾ। ಸಂದೀಪ್ ಘೋಷ್ ಅವರು ಅನಾಥ ಶವಗಳನ್ನು ಮಾರಿಕೊಳ್ಳುತ್ತಿದ್ದರು. ಆಸ್ಪತ್ರೆಯ ಬಯೋಮೆಡಿಕಲ್ ತ್ಯಾಜ್ಯ ಹಾಗೂ ಔಷಧಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದರು. ತಮಗೆ ಬೇಕಾದವರಿಂದ ಕಮಿಷನ್ ಪಡೆದು ಆಸ್ಪತ್ರೆಯ ಟೆಂಡರ್‌ಗಳನ್ನು ನೀಡುತ್ತಿದ್ದರು. ವೈದ್ಯ ವಿದ್ಯಾರ್ಥಿಗಳಿಂದ ಹಣ ಪೀಕಲು ವಿದ್ಯಾರ್ಥಿಗಳನ್ನು ಬೇಕಂತಲೇ ಫೇಲ್ ಮಾಡುತ್ತಿದ್ದರು...
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಉಪ ಅಧೀಕ್ಷಕರಾಗಿ ಕೆಲಸ ಮಾಡುತ್ತಾ, ಸಂದೀಪ್ ಘೋಷ್ ಅವರ ಹಗರಣಗಳನ್ನು ಬೊಟ್ಟು ಮಾಡಿದ ಕಾರಣಕ್ಕೆ ಎತ್ತಂಗಡಿ ಶಿಕ್ಷೆಗೆ ಗುರಿಯಾಗಿದ್ದ ಡಾ। ಅಖ್ತರ್ ಅಲಿ ಅವರು ಈ ಗಂಭೀರ ಆರೋಪಗಳನ್ನು ಟೀವಿ ವಾಹಿನಿಯೊಂದರ ಮುಂದೆ ಮಾಡಿದ್ದಾರೆ.
ಅಲ್ಲದೆ, ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಸಂಜಯ್ ರಾಯ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಸಂದೀಪ್ ಘೋಷ್ ಅವರ ಭದ್ರತಾ ಸಿಬ್ಬಂದಿಗಳ ಪೈಕಿ ಒಬ್ಬನಾಗಿದ್ದ ಎಂದೂ ಹೇಳಿದ್ದಾರೆ.
ಡಾ। ಘೋಷ್ ಅವರ ಅಕ್ರಮ ಚಟುವಟಿಕೆಗಳ ಬಗ್ಗೆ ರಾಜ್ಯ ವಿಚಕ್ಷಣಾ ಆಯೋಗಕ್ಕೆ ದೂರು ನೀಡಿದ್ದೆ. ಆ ಕುರಿತು ತನಿಖೆ ನಡೆಸಲು ರಚನೆಯಾದ ವಿಚಾರಣಾ ಆಯೋಗದ ಸದಸ್ಯನಾಗಿದ್ದೆ. ಡಾ। ಘೋಷ್ ತಪ್ಪಿತಸ್ಥ ಎಂಬುದು ಪತ್ತೆಯಾದರೂ ಅವರ ವಿರುದ್ಧ ಯಾವುದೇ ಕ್ರಮವಾಗಲಿಲ್ಲ. ವಿಚಾರಣಾ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಿದ ದಿನವೇ ನನ್ನನ್ನು ಆರ್‌ಜಿ ಕರ್ ಆಸ್ಪತ್ರೆಯಿಂದ ವರ್ಗ ಮಾಡಲಾಯಿತು ಎಂದಿದ್ದಾರೆ.
ವೈದ್ಯೆಯ ಕೊಲೆ ನಡೆದಿದ್ದರೂ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಡಾ। ಘೋಷ್ ಯತ್ನಿಸಿದ್ದರು ಎಂದು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು.
ವೈದ್ಯೆ ರೇಪ್, ಹತ್ಯೆ: ಪ್ರತಿಭಟನೆಯಲ್ಲಿ ಸೌರವ್ ಗಂಗೂಲಿ ದಂಪತಿ ಭಾಗಿ
ಕೋಲ್ಕತಾ: ಕೋಲ್ಕತಾದ ವೈದ್ಯೆ ರೇಪ್ ಹಾಗೂ ಹತ್ಯೆ ಪ್ರಕರಣ ಖಂಡಿಸಿ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಇತ್ತೀಚೆಗೆ ಈ ಪ್ರಕರಣವನ್ನು ಗಂಗೂಲಿ ‘ಸಣ್ಣ ಘಟನೆ’ ಎಂದು ಹೇಳಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಎಚ್ಚೆತ್ತ ಗಂಗೂಲಿ ಈಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಗೂ ತಮ್ಮ ಟ್ವೀಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಿಸಿದ್ದಾರೆ. ಈ ಮೂಲಕ ವೈದ್ಯೆ ರೇಪ್, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ವೈದ್ಯೆ ರೇಪ್: 10ನೇ ದಿನ ವೈದ್ಯ ಪ್ರತಿಭಟನೆ
ನವದೆಹಲಿ/ ಕೋಲ್ಕತಾ: ಬಂಗಾಳದ ಆರ್.ಜಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ವೈದ್ಯೆ ರೇಪ್ ಖಂಡಿಸಿ ಸ್ಥಾನಿಕ ವೈದ್ಯ ಸಂಘಟನೆ ಕರೆ ನೀಡಿದ್ದ ಮುಷ್ಕರ 10 ನೇ ದಿನ ಪೂರೈಸಿದೆ. ದೆಹಲಿ, ಕೋಲ್ಕತಾದಲ್ಲಿ ವೈದ್ಯರ ಪ್ರತಿಭಟನೆ ಮುಂದುವರೆದಿದೆ.ದಿಲ್ಲಿಯ ಜಂತರ್ ಮಂತರ್‌ನಲ್ಲಿ ಸ್ಥಾನಿಕ ವೈದ್ಯರು 10ನೇ ದಿನವೂ ಪ್ರತಿಭಟನೆ ನಡೆಸಿದರು. ಕೆಲಸ ಮಾಡುವ ಸ್ಥಳದಲ್ಲಿ ವೈದ್ಯರ ಸುರಕ್ಷತೆ ಮತ್ತಷ್ಟು ಸುಧಾರಣೆಯಾಗಬೇಕು ಎಂದು ಆಗ್ರಹಿಸಿದರು. ಇನ್ನು ಪ್ರತಿಭಟನೆ ವೇಳೆ ವೈದ್ಯರು ತಪ್ಪಿತಸ್ಥರನ್ನು ಶಿಕ್ಷಿಸಿ ಎನ್ನುವ ಘೋಷಣೆಗಳನ್ನು ಕೂಗಿದರು.
ಘಟನೆಯ ಕೇಂದ್ರ ಬಿಂದು ಪಶ್ಚಿಮ ಬಂಗಾಳದಲ್ಲಿಯೂ ಕಿರಿಯ ವೈದ್ಯರ ಪ್ರತಿಭಟನೆ ಮುಂದುವರೆದಿದ್ದು, ಪರಿಣಾಮ ರಾಜ್ಯದ ಹಲವು ಕಡೆ ಆರೋಗ್ಯ ಸೇವೆಗಳು ಅಸ್ತವ್ಯಸ್ತಗೊಂಡಿದೆ. ಕಿರಿಯ ವೈದ್ಯರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗದ ಕಾರಣ ಹಲವು ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರಿಗೆ , ಕಿರಿಯ ವೈದ್ಯರ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ‘ತಮ್ಮ ಬೇಡಿಕೆಗೆ ಈಡೇರುವವರೆಗೂ , ಸಂತ್ರಸ್ತೆಗೆ ನ್ಯಾಯ ಸಿಗುವ ತನಕವೂ ಹೋರಾಟ ಮುಂದುವರೆಸುತ್ತೇವೆ, ಮುಷ್ಕರ ಕೈ ಬಿಡಲ್ಲ’ ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದಾರೆ.